ಕಾವೇರಿ ಮುಂದೇನು..?


13-03-2018 614

ಬೆಂಗಳೂರು: ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದು ಬೇಡ ಎಂದು ಕಾನೂನು ತಜ್ಞರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿರುವ ಅಂಶ ಬೆಳಕಿಗೆ ಬಂದಿದೆ. ಇತ್ತೀಚೆಗೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕೋ ಬೇಡವೋ ಎಂಬ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲು ಕಾನೂನು ತಜ್ಞರ ಜತೆ ಚರ್ಚಿಸಿ ಎಂಬ ಸಲಹೆ ವ್ಯಕ್ತವಾಗಿತ್ತು.

ತದ ನಂತರ ಪುನ: ಕಾನೂನು ತಜ್ಞರ ಬಳಿ ಸಲಹೆ ಪಡೆದ ಸರ್ಕಾರಕ್ಕೆ, ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಹೋಗದಿರುವುದೇ ಒಳ್ಳೆಯದು ಎಂಬ ಸಲಹೆಗಳು ಹೆಚ್ಚಾಗಿ ಕೇಳಿ ಬಂದಿವೆ. ಕಾವೇರಿ ನ್ಯಾಯಮಂಡಳಿ ನೀಡಿದ ತೀರ್ಪಿನ ನಂತರವೂ ಸುಪ್ರೀಂ ಕೋರ್ಟ್‍ಗೆ ಹೋದ ವಿವಾದ ಪರಸ್ಪರ ಕೊಟ್ಟು ತೆಗೆದುಕೊಳ್ಳುವ ನೀತಿ ಅನುಸರಿಸಿ ಎಂಬ ನೆಲೆಯ ಮೇಲೆ ತೀರ್ಮಾನವಾಗಿದೆ.

ನದಿ ನೀರು ಯಾವುದೇ ರಾಜ್ಯದ ಸ್ವತ್ತಲ್ಲ ಎಂಬ ಸುಪ್ರೀಂ ಕೋರ್ಟ್ ಮಾತೇ, ಸಂಕಷ್ಟ ಕಾಲದಲ್ಲಿ, ಸುಭಿಕ್ಷ ಕಾಲದಲ್ಲಿ ಅದಕ್ಕನುಸಾರವಾಗಿ ನಡೆದುಕೊಳ್ಳಬೇಕು ಎಂಬ ಸಂದೇಶವನ್ನೇ ನೀಡಿರುವುದರಿಂದ ಸಂಕಷ್ಟ ಸೂತ್ರಕ್ಕೆ ನಿರ್ದಿಷ್ಟ ರೂಪು ರೇಷೆಗಳಿಲ್ಲ ಎಂದು ನಾವು ತಕರಾರು ತೆಗೆಯುತ್ತಾ ಕೂರುವುದು ಸರಿಯಲ್ಲ. ಕಾವೇರಿ ನದಿ ಪಾತ್ರದಲ್ಲಿ ವಾಡಿಕೆಯ ಮಳೆ ಬಂದರೆ ತಮಿಳು ನಾಡಿಗೆ ನೀರು ಕೊಡಬಹುದು. ವಾಡಿಕೆಯ ಮಳೆ ಬರದಿದ್ದರೆ ಶೇಕಡಾವಾರು ಹಂಚಿಕೆ ಮಾಡಿಕೊಳ್ಳಬಹುದು. ಈಗ ಬಂದಿರುವ ತೀರ್ಪು ಯಾವ್ಯಾವ ರಾಜ್ಯಗಳಿಗೆ ಎಷ್ಟೆಷ್ಟು ನೀರು?ಎಂದು ಸ್ಪಷ್ಟವಾಗಿ ಹೇಳಿರುವುದರಿಂದ ಅದರನುಸಾರ ನಡೆದುಕೊಳ್ಳಬಹುದು.

ಹೀಗೆ ನಡೆದುಕೊಳ್ಳುವುದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಈಗ ನೀಡಿರುವ ತೀರ್ಪಿನ ಅನುಸಾರ ಶೇಕಡಾವಾರು ನೀರು ಹಂಚಿಕೆ ಮಾಡಲಾಗಿದೆ. ಸಂಕಷ್ಟ ಸೂತ್ರಕ್ಕೂ ಇದು ಅನ್ವಯವಾಗುತ್ತದೆ. ಈ ಮಧ್ಯೆ ತಮಿಳ್ನಾಡಿನ ಕಾವೇರಿ ನದಿ ಪಾತ್ರದಲ್ಲಿ ಇಪ್ಪತ್ತು ಟಿಎಂಸಿಯಷ್ಟು ಅಂತರ್ಜಲ ಇದೆ. ಹೀಗಾಗಿ ಅದನ್ನು ಪರಿಗಣಿಸಿ ಎಂಬ ವಾದವನ್ನು ಪರಿಪೂರ್ಣವಾಗಿ ಒಪ್ಪದಿದ್ದರೂ ಹತ್ತು ಟಿಎಂಸಿಯಷ್ಟು ಅಂತರ್ಜಲ ತಮಿಳ್ನಾಡಿಗೆ ಸಿಗುತ್ತದೆ ಎಂದು ಸುಪ್ರೀಂಕೋರ್ಟ್ ಒಪ್ಪಿದೆ.

ಉಳಿದಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿಷಯವನ್ನು ಕೈಗೆತ್ತಿಕೊಂಡು ಕೇಂದ್ರದ ಮೇಲೆ ಒತ್ತಡ ಹೇರೋಣ. ನೀರು ನಿರ್ವಹಣಾ ಮಂಡಳಿ ರಚಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸುವಂತೆ ನೋಡಿಕೊಳ್ಳುವುದು ಸೂಕ್ತ. ಅದನ್ನು ಬಿಟ್ಟು ನಾವೀಗ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ದ ಮೇಲ್ಮನವಿ ಅಂತ ಹೋದರೆ ಪುನ: ಸಮಸ್ಯೆ ಸುಧೀರ್ಘ ಕಾಲ ಎಳೆಯುತ್ತದೆ. ಜನ ಆತಂಕದಲ್ಲಿ ಕಾಲ ತಳ್ಳುವಂತಾಗುತ್ತದೆ. ಇದಕ್ಕೆ ಅವಕಾಶ ನೀಡುವುದು ಬೇಡ.

ಈಗಾಗಲೇ ಕಾವೇರಿ ನ್ಯಾಯಮಂಡಳಿಯ ತೀರ್ಪಿನ ನಂತರವೂ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 14.75 ಟಿಎಂಸಿ ನೀರನ್ನು ಸುಪ್ರೀಂಕೋರ್ಟ್ ನೀಡಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು ಎಂದು ಹಲವು ಕಾನೂನು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಕಾನೂನು ತಜ್ಞರ ಈ ಸಲಹೆಯ ಹಿನ್ನೆಲೆಯಲ್ಲಿ ಸರ್ಕಾರ ಗೊಂದಲದಲ್ಲಿದ್ದು ಮುಂದೇನು ಮಾಡಬೇಕು ಎನ್ನುವ ಸಂಬಂಧ ವಿವರವಾಗಿ ಮಾಹಿತಿ ನೀಡಿ ಎಂದು ಕಾನೂನು ತಜ್ಞರ ಬಳಿಯೇ ಕೇಳಿದೆ ಎಂದು ಉನ್ನತ ಮೂಲಗಳು ಹೇಳಿವೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

cauvery supreme court ಕಾನೂನು ತಜ್ಞ ಗೊಂದಲ