ತಂದೆ-ತಾಯಿ ಆತ್ಮಹತ್ಯೆ: ಮಗು ಅನಾಥ


12-03-2018 912

ಬೆಂಗಳೂರು: ಪತಿ-ಪತ್ನಿ ಜಗಳದಲ್ಲಿ ಒಂದೂವರೆ ವರ್ಷದ ಮಗು ಅನಾಥವಾಗಿದೆ. ತನ್ನೆದುರೇ ತಾಯಿ ನೇಣು ಹಾಕಿಕೊಂಡರೆ ತಂದೆ ಹೆದರಿ ಓಡಿ ಹೋಗಿ ರೈಲಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದಾನೆ. ಘಟನೆ ನಗರದ ಕೆ.ಆರ್.ಪುರಂ ಅನುಕುಮಾರ್ ಲೇಔಟ್‍ನಲ್ಲಿ ನಡೆದಿದೆ.

ಇದಕ್ಕೆಲ್ಲಾ ಸಾಕ್ಷಿಯಾದ ಮಗುವಿಗೆ ಅಳು ಬಿಟ್ಟು ಎನೇನೂ ಗೊತ್ತಾಗಿಲ್ಲ. ಕೌಟುಂಬಿಕ ಕಲಹದಿಂದ ಪತ್ನಿ ಮೊದಲು ನೇಣಿಗೆ ಶರಣಾದರೆ ನಂತರ ಸಾಫ್ಟ್ ವೇರ್ ಎಂಜಿನಿಯರ್ ಪತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ  ಘಟನೆ ಇದು. ಆತ್ಮಹತ್ಯೆ ಮಾಡಿರುವ ಪತಿ-ಪತ್ನಿಯನ್ನು ಅನುಕುಮಾರ್ ಲೇಔಟ್‍ನ ಧರಣಿ(28) ದಿನೇಶ್‍ಕುಮಾರ್(31)ಎಂದು ಗುರುತಿಸಲಾಗಿದೆ. ಇವರ ಮಧ್ಯೆ ಒಂದೂವರೆ ವರ್ಷದ ಮಗು ಅನಾಥವಾಗಿ ಅಜ್ಜನ ಆಶ್ರಯದಲ್ಲಿದೆ.

ತಮಿಳುನಾಡಿನ ಕೊಯಮತ್ತೂರು ಮೂಲದ ಧರಣಿಯನ್ನು ಅಲ್ಲಿಯವರೇ ಆದ ದಿನೇಶ್‍ಕುಮಾರ್ 3 ವರ್ಷಗಳ ಹಿಂದೆ ವಿವಾಹವಾಗಿದ್ದರು. ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ದಿನೇಶ್‍ಕುಮಾರ್‍ಗೆ ಐಟಿಪಿಎಲ್‍ನ ಕಂಪನಿಯೊಂದಲ್ಲಿ ಕೆಲಸ ಸಿಕ್ಕಿದ್ದರಿಂದ ನಗರಕ್ಕೆ ಪತ್ನಿಯನ್ನು ಕರೆದುಕೊಂಡು ಬಂದು ಅನುಕುಮಾರ್ ಲೇಔಟ್‍ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.

ದಂಪತಿಗೆ ಒಂದೂವರೆ ವರ್ಷದ ಗಂಡು ಮಗುವಿದ್ದು ಇತ್ತೀಚಿಗೆ ಕೌಟುಂಬಕ ವಿಚಾರಗಳಿಗೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ನಿನ್ನೆ ಕೆಲಸಕ್ಕೆ ರಜೆ ಇದ್ದರಿಂದ ಮನೆಯಲ್ಲಿದ್ದ ದಿನೇಶ್‍ಕುಮಾರ್ ಮಧ್ಯಾಹ್ನ ಪತ್ನಿಯ ಜೊತೆ ಜಗಳ ತೆಗೆದಿದ್ದಾನೆ. ಇಬ್ಬರ ಜಗಳ ವಿಕೋಪಕ್ಕೆ ತಿರುಗಿದಾಗ ಧರಣಿ ಕೊಠಡಿಯ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡಿದ್ದಾರೆ. ಎಷ್ಟು ಹೊತ್ತು ಕಳೆದರೂ ಪತ್ನಿ ಬಾಗಿಲು ತೆಗೆಯದಿದ್ದರಿಂದ ಆತಂಕಗೊಂಡ ದಿನೇಶ್ ಕುಮಾರ್ ಬಾಗಿಲು ಮುರಿದು ಒಳ ಹೋಗಿ ನೋಡಿದಾಗ ನೇಣು ಬಿಗಿದುಕೊಂಡು ನೇತಾಡುತ್ತಿದ್ದ ಧರಣಿಯನ್ನು ಕೆಳಗಿಳಿಸಿದ್ದಾರೆ.

ಆದರೆ ಅಷ್ಟರಲ್ಲಿ ಆಕೆ ಸಾವನ್ನಪ್ಪಿದ್ದು ಆತಂಕಗೊಂಡ ದಿನೇಶ್‍ಕುಮಾರ್ ಮನೆ ಬಾಗಿಲು ಹಾಕದೇ ಹೂಡಿ ಬಳಿ ಹೋಗಿ ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗು ಹೊರಬಂದು ಅಳುತ್ತಿರುವುದನ್ನು ನೋಡಿದ ಅಕ್ಕ-ಪಕ್ಕದವರು ಬಂದು ನೋಡಿದಾಗ ಧರಣಿ ಸಾವನ್ನಪ್ಪಿರುವುದು ಕಂಡುಬಂದಿದೆ ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿ ಹತ್ತಿರದಲ್ಲೇ ವಾಸಿಸುತ್ತಿದ್ದ ದಿನೇಶ್‍ಕುಮಾರ್ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಅನಾಥವಾಗಿದ್ದ ಮಗುವನ್ನು ಅಜ್ಜ ಕರೆದುಕೊಂಡು ಹೋಗಿದ್ದು ಪ್ರಕರಣ ದಾಖಲಿಸಿರುವ ಕೆಆರ್ ಪುರಂ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

suicide mother and father ಅಕ್ಕ-ಪಕ್ಕ ಕೊಠಡಿ