ನಾಡ ಧ್ವಜದ ವಿರುದ್ಧ ವಾಟಾಳ್ ಗುಡುಗು


08-03-2018 505

ಬೆಂಗಳೂರು: ರಾಜ್ಯ ಸರ್ಕಾರ ಇಂದು ಬಿಡುಗಡೆ ಮಾಡಿರುವ ನಾಡಧ್ವಜದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡ ಚಳವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್, ಇದು ಸರ್ಕಾರಿ ಧ್ವಜ, ನಾಡಧ್ವಜವಲ್ಲ, ಯಾವ ಕಾರಣಕ್ಕೂ ಕನ್ನಡಿಗರು ಇದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಗುಡುಗಿದ್ದಾರೆ.

ನಾಡಧ್ವಜ ರಚಿಸಿರುವವರಿಗೆ ಇತಿಹಾಸ ಗೊತ್ತಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅವರಿಗೆ ಇದರ ಗಂಧ ಗಾಳಿಯೂ ಗೊತ್ತಿಲ್ಲ. ಸಾಹಿತಿಗಳಿಗೂ ಗೊತ್ತಿಲ್ಲ. ಹೀಗಾಗಿ ಇಂತಹ ಸಲ್ಲದ ಧ್ವಜವನ್ನು ಸೃಷ್ಟಿಸಲು ಕಾರಣರಾಗಿದ್ದಾರೆ ಎಂದು ದೂರಿದರು.

1960 ರ ವೇಳೆಗೆ ರಾಮಮೂರ್ತಿಯವರು ಹಾಗೂ ನಾನು ಸೇರಿ ಕನ್ನಡ ಧ್ವಜ ರೂಪಿಸಿದೆವು. ಆಗ ಅದರ ಬಣ್ಣ ಹಳದಿ. ಈ ಬಣ್ಣದ ನಡುವೆ ಏಳು ಸಾಮ್ರಾಜ್ಯಗಳನ್ನು ಸಂಕೇತಿಸುವ ದಳಗಳಿದ್ದವು. ಮುಂದೆ 1966ರ ವೇಳೆಗೆ ಕೆಂಪು ಮತ್ತು ಹಳದಿ ಬಣ್ಣ ಶುಭಕರ ಎಂದು ರಾಮಮೂರ್ತಿಯವರು ಸೂಚಿಸಿದರು. ಹೀಗೆ ರೂಪುಗೊಂಡ ನಾಡಧ್ವಜ ಕಳೆದ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ನಾಡಿನ ಮೂಲೆ ಮೂಲೆಯಲ್ಲಿ ಹಾರಾಡುತ್ತಿದೆ. ಲಕ್ಷಾಂತರ ಸ್ತಂಭಗಳ ಮೇಲೆ ಕೆಂಪು-ಹಳದಿ ಬಣ್ಣದ ನಾಡಧ್ವಜ ರಾರಾಜಿಸುತ್ತಿದೆ. ಆದರೆ ಇದ್ದಕ್ಕಿದ್ದಂತೆ ಇವರೇಕೆ ಧ್ವಜವನ್ನು ಬದಲಿಸಿದರು?.

ನಾಡಧ್ವಜವನ್ನು ಬದಲಿಸುವ ತರಾತುರಿ ಏನಿತ್ತು? ರಾಜ್ಯದ ಜನ ಹಸಿವಿನಿಂದ ಕಂಗೆಟ್ಟು ಕುಳಿತಿದ್ದರೆ? ಅಥವಾ ನಾಡಧ್ವಜ ಬದಲಾಗಬೇಕು ಎಂದು ತಹತಹಿಸುತ್ತಿದ್ದರೆ?ಎಂದು ಪ್ರಶ್ನೆ ಮಾಡಿದರು. ಯಾವ ಕಾರಣಕ್ಕೂ ಈ ಧ್ವಜವನ್ನು ಒಪ್ಪುವ ಪ್ರಶ್ನೆಯೇ ಇಲ್ಲ. ನಾನು ದೆಹಲಿ ಪ್ರವಾಸದಲ್ಲಿದ್ದು ಬಂದ ನಂತರ ಎಲ್ಲರ ಜತೆ ಮಾತುಕತೆ ನಡೆಸಿ ರಾಜ್ಯಾದ್ಯಂತ ಭಾರೀ ಹೋರಾಟ ರೂಪಿಸುತ್ತೇವೆ ಎಂದರು. ನಾಡಧ್ವಜದ ಬಣ್ಣವನ್ನು ಹಾಗೆಯೇ ಉಳಿಸಿಕೊಂಡು, ಬೇಕಿದ್ದರೆ ಮಧ್ಯೆ ಕರ್ನಾಟಕದ ಲಾಂಛನವನ್ನು ಹಾಕಬಹುದಿತ್ತು. ಆದರೆ ಹಾಗೆ ಮಾಡದೆ ಅನಗತ್ಯವಾಗಿ ಬಿಳಿ ಬಣ್ಣವನ್ನು ತುರುಕಲಾಗಿದೆ. ಇದು ಸರಿಯಲ್ಲ ಎಂದು ನುಡಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Vatal Nagaraj state flag ಅನಗತ್ಯ ಕರ್ನಾಟಕ