5 ದಿನ ಪೊಲೀಸ್ ಕಸ್ಟಡಿಗೆ ತೇಜ್ ರಾಜ್


08-03-2018 1057

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪಿ ತೇಜ್ ರಾಜ್ ಶರ್ಮನನ್ನು 5 ದಿನಗಳ ಕಾಲ ನ್ಯಾಯಾಧೀಶರು ಪೊಲೀಸರ ವಶಕ್ಕೆ ನೀಡಿದ್ದಾರೆ. ಲೋಕಾಯುಕ್ತ ಸಿಬ್ಬಂದಿ ಹಿಡಿದುಕೊಟ್ಟ ಆರೋಪಿ ತೇಜ್ ರಾಜ್ ಶರ್ಮನನ್ನು ಬಂಧಿಸಿ ವಿಚಾರಣೆ ನಡೆಸಿದ ವಿಧಾನಸೌಧ ಪೊಲೀಸರು ಬುಧವಾರ ರಾತ್ರಿ ಬೌರಿಂಗ್ ಆಸ್ಪತ್ರೆಯಲ್ಲಿ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ತಪಾಸಣೆ ನಡೆಸಿದ ವೈದ್ಯರು ತೇಜ್‍ರಾಜ್ ಮಾನಸಿಕವಾಗಿ ಸದೃಢವಾಗಿದ್ದಾನೆ ಎಂದು ವರದಿ ನೀಡಿದ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

ಘಟನೆ ಸಂಬಂಧ ಪೂರ್ಣ ಪ್ರಮಾಣದಲ್ಲಿ ಹೇಳಿಕೆ ದಾಖಲಿಸಿಕೊಳ್ಳಬೇಕಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲು ಆರೋಪಿಯನ್ನು 10 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದರು. ಮನವಿ ಆಲಿಸಿದ ನ್ಯಾಯಾಧೀಶರು, ಆರೋಪಿಯನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದ್ದು, ಆತನನ್ನು ವಶಕ್ಕೆ ಪಡೆದುಕೊಂಡ ವಿಧಾನಸೌಧ  ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಆರೋಪಿ ತೇಜ್ ರಾಜ್ ಶರ್ಮಾ ವಿರುದ್ಧ  ಕೊಲೆ ಯತ್ನ (ಸೆಕ್ಷನ್ 307), ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ (ಸೆಕ್ಷನ್ 353), ಜೀವಬೆದರಿಕೆ (506 ಬಿ), ಅಪರಾಧಕ್ಕೆ ಒಳಸಂಚು (ಸೆಕ್ಷನ್ 120ಬಿ 343), ಗಲಭೆ ಸೃಷ್ಟಿ (ಐಪಿಸಿ ಸೆಕ್ಷನ್ 147) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ನ್ಯಾಯಾಲಯದಿಂದ ವಶಕ್ಕೆ ಪಡೆದ ಆರೋಪಿ ತೇಜ್ ರಾಜ್ ಶರ್ಮಾನನ್ನು ವಿಧಾನಸೌಧ ಪೊಲೀಸ್ ಠಾಣೆಯಲ್ಲಿಟ್ಟು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿ ತೇಜ್ ರಾಜ್ ಶರ್ಮಾನಿಗೆ ಲೋಕಾಯುಕ್ತರ ಹತ್ಯೆ ನಡೆಸುವಂತೆ ಯಾರಾದರೂ ಆದೇಶ ನೀಡಿದ್ದರಾ..? ಇದು ಪೂರ್ವಯೋಜಿತ ಕೃತ್ಯವಾ..? ತೇಜ್ ರಾಜ್ ಹಿಂದೆ ಯಾರಾದರೂ ಇದ್ದಾರಾ..? ಭ್ರಷ್ಟಾಚಾರಿಗಳು ಹತ್ಯೆ ಯತ್ನದ ಹಿಂದಿದ್ದಾರಾ..? ಈ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಆರೋಪಿಯು ವಿಶ್ವನಾಥ್ ಶೆಟ್ಟಿ ಅವರನ್ನು ಕೊಲೆಗೈಯಲು ಮುಂದಾಗಿದ್ದೆ ಎನ್ನುವುದು ಸೇರಿ ಹಲವು ವಿಚಿತ್ರ ಹೇಳಿಕೆಗಳನ್ನು ನೀಡುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Lokayukta justice ಆದೇಶ ವಿಶ್ವನಾಥ್ ಶೆಟ್ಟಿ