ಸೀದಾ ಬಾತ್…ಸಿದ್ದರಾಮಯ್ಯ


01-03-2018 439

ತುಮಕೂರು: ಪಾವಗಡದಲ್ಲಿ ನಿರ್ಮಾಣವಾಗಿರುವ ಅತಿ ದೊಡ್ಡ ಸೋಲಾರ್ ಪಾರ್ಕ್ ಲೋಕಾರ್ಪಣೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇದೊಂದು ಐತಿಹಾಸಿಕ ದಿನ, ಇದು ಕರ್ನಾಟಕಕ್ಕೆ ದೊಡ್ಡ ಗೌರವ ತಂದುಕೊಟ್ಟಿದೆ ಎಂದು ಬಣ್ಣಿಸಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ 600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಯಾಗಲಿದ್ದು, ಇನ್ನು 10 ತಿಂಗಳಲ್ಲಿ 1400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ, ಸಮರ್ಪಕ ವಿದ್ಯುತ್ ಸಿಗುವುದರಿಂದ ಪಾವಗಡಕ್ಕೆ ಕೈಗಾರಿಕೆಗಳು ಬರಲಿವೆ, ಜನರ ಜೀವನ ಮಟ್ಟ ಸುಧಾರಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದೇ ವೇಳೆ, ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಸಿದ್ದರಾಮಯ್ಯ, ರೈಲು ಯೋಜನೆಗೆ ರಾಜ್ಯದ ಅರ್ಧ ದುಡ್ಡು ವಿನಿಯೋಗವಾಗುತ್ತದೆ, ಆದರೂ ಕೇಂದ್ರ ಸರ್ಕಾರ, ಅದು ತಮ್ಮ ಯೋಜನೆ ಎಂಬಂತೆ ಪ್ರಧಾನಿಯವರ ಫೋಟೊ ಹಾಕುತ್ತಾರೆ ಎಂದು ಟೀಕಿಸಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಲೆಕ್ಕಕೊಡಿ ಅಂತಾರೆ, ಲೆಕ್ಕ ಕೇಳೋಕೆ ಅವರು ಯಾರು? ಅವರಿಗೆ ಸಂವಿಧಾನವೇ ಗೊತ್ತಿಲ್ಲ, ಸುಖಾ ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗುತ್ತಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಇತ್ತೀಚೆಗೆ ಪ್ರಧಾನಿ ಮೋದಿ ಮೂರು ಬಾರಿ ರಾಜ್ಯಕ್ಕೆ ಬಂದಾಗಲೂ, ರಾಜ್ಯದ ರೈತರು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿನ ಸಾಲ ಮನ್ನಾ ಮಾಡುತ್ತಾರೆ ಎಂದು ಕಾದಿದ್ದರು, ಆದರೆ ಪ್ರಧಾನಿ ಆ ಕುರಿತು ಮಾತನಾಡಲೇ ಇಲ್ಲ. ಮಹದಾಯಿ ಸಮಸ್ಯೆ ಬಗ್ಗೆಯೂ ಉಸಿರೇ ಎತ್ತಿಲ್ಲ. ಕೇವಲ ರಾಜಕೀಯ ಪ್ರೇರಿತ ಸುಳ್ಳು ಆರೋಪ ಮಾಡುತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.


ಒಂದು ಕಮೆಂಟನ್ನು ಬಿಡಿ