ಬಿಎಂಟಿಸಿ ಬಸ್ಸಲ್ಲೇ ಯುವಕನ ಕಗ್ಗೊಲೆ


21-02-2018 310

ಬೆಂಗಳೂರು: ಹೊಸೂರು ರಸ್ತೆಯ ಕೋಣಪ್ಪನ ಅಗ್ರಹಾರದ ಬಳಿ ಹಾಡು ಹಗಲೇ ಬಿಎಂಟಿಸಿ ಬಸ್‍ನಲ್ಲೇ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ ಮೂವರು ಪರಾರಿಯಾಗಿದ್ದಾರೆ. ಕೊಲೆಯಾದ ವ್ಯಕ್ತಿಯು ಸುಮಾರು 30 ವರ್ಷ ವಯಸ್ಸಿನವನಾಗಿದ್ದು ಸದ್ಯಕ್ಕೆ ಆತನ ಹೆಸರು, ವಿಳಾಸ ಸದ್ಯಕ್ಕೆ ತಿಳಿದು ಬಂದಿಲ್ಲ. ತೆಲಂಗಾಣದ ಕಡೆಯಿಂದ ಯುವಕನನ್ನು ಹಿಂಬಾಲಿಸಿಕೊಂಡೇ ಬಂದಿದ್ದ ಮೂವರು ದುಷ್ಕರ್ಮಿಗಳು, ಆನೇಕಲ್‍ನಿಂದ ಸಿಟಿ ಮಾರುಕಟ್ಟೆಗೆ ಹೋಗುತ್ತಿದ್ದ ಬಿಎಂಟಿಸಿ ಬಸ್‍ನಲ್ಲಿ ಹತ್ತಿದ್ದಾರೆ.

ಕೋಣಪ್ಪನ ಅಗ್ರಹಾರದ ಬಳಿ ಯುವಕ ಬಸ್ ಹತ್ತಿದ್ದೇ ತಡ ಮೂವರು ದುಷ್ಕರ್ಮಿಗಳು ಆತನ ಎದೆ, ಹೊಟ್ಟೆಗೆ ಚಾಕುವಿನಿಂದ ಇರಿದು ಕ್ಷಣಾರ್ಧದಲ್ಲಿ ಬಸ್ ಇಳಿದು ಪರಾರಿಯಾಗಿದ್ದಾರೆ. ಬಸ್‍ನಲ್ಲಿದ್ದ ಪ್ರಯಾಣಿಕರು ಏನು ನಡೆಯುತ್ತಿದೆ ಎಂದು ನೋಡುವಷ್ಟರಲ್ಲಿಯೇ ಯುವಕ ಕೊಲೆಯಾಗಿ ಬಿದ್ದಿದ್ದ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆಯೊಬ್ಬರ ಜೊತೆಗಿನ ಅನೈತಿಕ ಸಂಬಂಧದ ವಿಚಾರದಲ್ಲಿ ಯುವಕನ ಕೊಲೆ ನಡೆದಿದೆ ಎಂದು ಶಂಕಿಸಲಾಗಿದ್ದು, ಕೊಲೆಯಾದ ಯುವಕ ಹಾಗೂ ಕೊಲೆಗೈದವರು ತೆಲುಗು ಮಾತನಾಡುತ್ತಿದ್ದು, ತೆಲಂಗಾಣ ಮೂಲದವರೆಂದು ಶಂಕಿಸಲಾಗಿದೆ. ಕೃತ್ಯವೆಸಗಿದ ಆರೋಪಿಗಳ ಬಂಧನಕ್ಕಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Murede BMTC ಡಾ.ಬೋರಲಿಂಗಯ್ಯ ತೆಲಂಗಾಣ