ಪರೀಕ್ಷಾ ಅಕ್ರಮಕ್ಕೆ 5ಲಕ್ಷ ದಂಡ..!


10-02-2018 544

ಬೆಂಗಳೂರು: ಪ್ರಶ್ನೆ ಪತ್ರಿಕೆ ಸೋರಿಕೆ ಇನ್ನಿತರ ಅಕ್ರಮಗಳಿಗೆ ಅವಕಾಶವಿಲ್ಲದಂತೆ ದ್ವಿತಿಯ ಪಿಯುಸಿ ಪರೀಕ್ಷೆ ನಡೆಸಲು ಮುಂದಾಗಿರುವ ಪದವಿಪೂರ್ವ ಶಿಕ್ಷಣ ಮಂಡಳಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುವ ಕಠಿಣ ಕ್ರಮದ ಸುತ್ತೋಲೆ ಹೊರಡಿಸಿದೆ.

ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಮಾಡುವವರಿಗೆ 5 ಲಕ್ಷ ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿರುವುದನ್ನು ಮನಗಂಡಿರುವ ಶಿಕ್ಷಣ ಮಂಡಳಿಯು ಅದರ ಜೊತೆಗೆ 5 ಲಕ್ಷ ದಂಡ ವಿಧಿಸುವ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.

ಪಿಯು ಶಿಕ್ಷಣ ಮಂಡಳಿ ಹೊರಡಿಸಿರುವ ಈ ಸುತ್ತೋಲೆಯನ್ನು ರಾಜ್ಯದ ಎಲ್ಲ ಪದವಿಪೂರ್ವ ಕಾಲೇಜುಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕೆಂದು ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರಿಗೆ ಸೂಚನೆ ನೀಡಿ ಶಿಕ್ಷೆ ಹಾಗೂ ದಂಡದ ಮಾಹಿತಿಯನ್ನು ವಿದ್ಯಾರ್ಥಿಗಳಿಗೂ ಒದಗಿಸುವಂತೆ ತಿಳಿಸಿದೆ. ಪರೀಕ್ಷೆಯ ಯಾವುದಾದರೂ ರೀತಿಯಲ್ಲಿ ಅಂದರೆ ಎಸ್‍ಎಂಎಸ್, ಮೊಬೈಲ್ ಹಾಗೂ ಇನ್ನಿತರ ರೀತಿಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗಿದೆ.

2016ರಲ್ಲಿ ನಡೆದ ಪಿಯು ಪರೀಕ್ಷೆಯಲ್ಲಿ ಕೆಲ ವಿಜ್ಞಾನ ವಿಷಯಗಳ ಪತ್ರಿಕೆಗಳು ಒಂದಲ್ಲ ಎರಡಲ್ಲ ಮೂರು ಬಾರಿ ಸೋರಿಕೆಯಾಗುವ ಮೂಲಕ ಪ್ರಶ್ನೆಪತ್ರಿಕೆ ಭದ್ರತೆ ಕುರಿತಂತೆ ಪಿಯು ಮಂಡಳಿ ತಲೆತಗ್ಗಿಸುವಂತೆ ಮಾಡಿತ್ತು ಹಾಗೂ ಇಲಾಖೆಯಲ್ಲಿನ ಕೆಲ ಅಧಿಕಾರಿಗಳೇ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಕುರಿತು ಮಾಹಿತಿ ಲಭ್ಯವಾದ ಕಾರಣ ಅಂತಹ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗಿತ್ತು.

ಪ್ರತಿ ವರ್ಷ ಒಂದಲ್ಲ ಒಂದು ಕಾರಣಕ್ಕೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುವ ಮೂಲಕ ಪಿಯುಸಿ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ಹಾಗೂ ಪೋಷಕರಿಗೆ ಭಾರಿ ಮಾನಸಿಕ ಗೊಂದಲವುಟಾಗುವುದರೊಂದಿಗೆ  ಪ್ರಶ್ನೆಪತ್ರಿಕೆ ಭದ್ರತೆ ನಿರ್ವಹಿಸುತ್ತಿರುವ ಪಿಯು ಮಂಡಳಿಯೂ ಸಹ ಭಾರಿ ಮುಜುಗರಕ್ಕೀಡಾಗುತ್ತಿತ್ತು. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿರುವ ಪಿಯು ಬೋರ್ಡ್, ಇಂತಹ ಸುತ್ತೋಲೆ ಹೊರಡಿಸುವ ಮೂಲಕ ಪ್ರಶ್ನೆಪತ್ರಿಕೆ ಭದ್ರತೆಗೆ ಮತ್ತೊಂದು ಹೆಜ್ಜೆ ಹಾಕಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

PU board Question paper ಸುತ್ತೋಲೆ ಗೊಂದಲ