ಯಡಿಯೂರಪ್ಪ ಅವರ ಹೇಳಿಕೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ


26-04-2017 855

ಮೈಸೂರು : ವಿಧಾನಸಭೆಗೆ ಅವಧಿಗೆ ಮೊದಲೇ ಚುನಾವಣೆ ಎದುರಾಗಲಿದೆ ಎಂಬ ಯಡಿಯೂರಪ್ಪ ಅವರ ಹೇಳಿಕೆ ಕುರಿತು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದಾಗ ಸಿಎಂ ಈ ರೀತಿ ಪ್ರತಿಕ್ರಿಯಿಸಿದರು.

ಯಡಿಯೂರಪ್ಪ ಅವರು ಹೇಳಿದ್ದು ಈ ವರೆಗೆ ಯಾವುದೂ ನಿಜ ಆಗಿಲ್ಲ. ಅವರದ್ದು ಕೇವಲ ಹಿಟ್ ಅಂಡ್ ರನ್ ಕೇಸು ಎಂದು ವ್ಯಂಗ್ಯವಾಡಿದರು.

ಮೂವರು ಮಂತ್ರಿಗಳು ಜೈಲಿಗೆ ಹೋಗಲಿದ್ದಾರೆ. ಇನ್ನೇನೋ ಆಗಲಿದೆ ಎಂದು ಯಡಿಯೂರಪ್ಪ ಹೇಳಿದ್ದರು. ಅದು ನಿಜ ಆಯಿತೇ ? ಯಾವುದಾದರೂ ಒಂದು ನಿಜ ಆಗಿದೆಯೇ?  ಏಕೆ ಯಾವುದೂ ನಿಜ ಆಗಿಲ್ಲ ಎಂದು ನೀವೇ (ಮಾಧ್ಯಮ ಪ್ರತಿನಿಧಿಗಳು) ಅವರನ್ನು ಕೇಳಬೇಕಿತ್ತು ಎಂದರು.

ಯಡಿಯೂರಪ್ಪ ಅವರು ಇನ್ ಕಮ್ ಟ್ಯಾಕ್ಸ್ ಕಮಿಷನರ್ ಆಗಿದ್ದಾಯ್ತು. ಈಗ ಎಲೆಕ್ಷನ್ ಕಮಿಷನರ್ ಆಗಿದ್ದಾರೆ. ಮುಂದೆ ಏನೇನು ಆಗುವರೋ ಗೊತ್ತಿಲ್ಲ ಎಂದು ಹೇಳಿದರು.

ನನ್ನ ವಿರುದ್ಧ ಯಡಿಯೂರಪ್ಪ ಅವರು ಅಧಿಕಾರ ದುರುಪಯೋಗದ ಮಾತನಾಡಿದ್ದಾರೆ. ಅವರಿಂದ ಇಂಥದ್ದನ್ನು ನಾವು ಕೇಳಬೇಕೇ ? ಭೂತದ ಬಾಯಲ್ಲಿ ಭಗವದ್ಗತ ಕೇಳಿದಂತೆ ಆಗುತ್ತದೆ ಅಷ್ಟೆ. 

ಅಧಿಕಾರದಲ್ಲಿ ಇದ್ದಾಗ ಮಾಡಬಾರದ್ದನ್ನು ಮಾಡಿ ಈಗ ನಮಗೆ ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರು ಅಸಂಬದ್ಧವಾಗಿ ಮಾತನಾಡುತ್ತಾರೆ. ಸುಳ್ಳುಗಳನ್ನು ಹೇಳುತ್ತಾರೆ. ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸದಿರುವುದೇ ಗೌರವ ಎಂದರು.

ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದ ಜನರಿಗೆ ನೀಡಿದ್ದ ಎಲ್ಲ ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಸರ್ಕಾರದ ಅವಧಿ ಇನ್ನು ಒಂದು ವರ್ಷ ಇದೆ. ಈ ಅವಧಿಯಲ್ಲಿ ಎಲ್ಲ ಭರವಸೆಗಳು ಅನುಷ್ಠಾನಗೊಳ್ಳಲಿವೆ ಎಂದು ಹೇಳಿದರು.

ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ತರುವ ಕುರಿತು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಅದು ಬಿಜೆಪಿಯ ರಹಸ್ಯ ಅಜೆಂಡಾ. ಈಗಾಗಲೇ ಕಾಯಿದೆ ಜಾರಿಯಲ್ಲಿದೆ. ಹಾಲು ಕೊಡುವ ಹಸುಗಳನ್ನು ವಧೆ ಮಾಡಬಾರದು ಎಂದು ಕಾಯಿದೆ ಹೇಳುತ್ತದೆ. ಬಿಜೆಪಿಯ ರಹಸ್ಯ  ಕಾರ್ಯಸೂಚಿ  ಒಂದೊಂದಾಗಿ ಜಾರಿಗೆ ಬರುತ್ತಿದೆ.

ದೆಹಲಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳಿರಲಿಲ್ಲ. ಉತ್ತಮ ಪ್ರದರ್ಶನ ನೀಡಬಹುದು ಎಂಬ ಅನಿಸಿಕೆ ಇತ್ತು. ಆ ರೀತಿಯೇ ಆಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.

ಬೆಂಗಳೂರಿನಲ್ಲಿ ಸುರಂಗ ಮಾರ್ಗದ ರಸ್ತೆ ನಿರ್ಮಿಸುವ ವಿಚಾರ ಇನ್ನೂ ಚರ್ಚೆ ಹಂತದಲ್ಲಿದೆ. ಬಿಜೆಪಿಯವರ ಆರೋಪಗಳಿಗೆ ಹೆದರಿ ಉಕ್ಕು ಸೇತುವೆ ಯೋಜನೆ ಕೈ ಬಿಡಲಿಲ್ಲ. ಹಸಿರು ಪೀಠದ ತಡೆ ಆದೇಶ, ಕೆಲ ಸಾರ್ಜವನಿಕರ ವಿರೋಧದಿಂದ ಹಿಂದೆ ಸರಿಯಬೇಕಾಯಿತು.

ದತ್ತ ಪೀಠ ವಿವಾದ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಗಮನ ಹರಿಸುವಂತೆ ಕಾನೂನು ಇಲಾಖೆ ಸೂಚಿಸಲಾಗಿದೆ ಎಂದು ಸಿಎಂ ಹೇಳಿದರು. 
 
ವಿಶ್ವನಾಥ್ ಪಕ್ಷ ಬಿಡುವುದಿಲ್ಲ : 

ಮಾಜಿ ಸಚಿವ ವಿಶ್ವನಾಥ್ ಹೇಳಿಕೆಗಳಿಗೆ ಯಾವತ್ತೂ ಪ್ರತಿಕ್ರಿಯಿಸಿಲ್ಲ. ಕಾಂಗ್ರೆಸ್ ನನ್ನ ತಾಯಿ ಎಂದು ಅವರು ಹೇಳಿದ್ದಾರೆ. ಹೀಗಾಗಿ ವಿಶ್ಪನಾಥ್ ಪಕ್ಷ ಬಿಡುವುದಿಲ್ಲ ಎಂದರು.

ರಾಯಚೂರಿನಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದು ಮೂರು ತಿಂಗಳಾಗಿಲ್ಲ. ಆಗಲೇ ಜೂನ್ ತಿಂಗಳಲ್ಲಿ ಮೈಸೂರಿನಲ್ಲಿ ಸಮ್ಮೇಳನ ನಡೆಸಲು ಹೊರಟಿರುವುದು ಸರಿಯಲ್ಲ ಎಂಬ ಪ್ರಗತಿಪರ ಸಾಹಿತಿಗಳ ಹೇಳಿಕೆಗೆ, ಈಗ ಸಿದ್ಧತೆ ನಡೆಯುತ್ತಿದೆ ಅಷ್ಟೆ ಎಂದರು.

ನಾಳೆ ದುಬೈಗೆ :-
ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಉದ್ಘಾಟನೆಗೆ ನಾಳೆ ದುಬೈಗೆ ತೆರಳುತ್ತಿದ್ದೇನೆ. ಅಲ್ಲಿಯ ಕನ್ನಡಿಗರು ಸೇರಿ ವೇದಿಕೆ ರಚನೆ ಮಾಡಿಕೊಂಡಿದ್ದಾರೆ. ಮೂರು ದಿನಗಳ ಪ್ರವಾಸ ಇದಾಗಿದೆ ಎಂದು ಹೇಳಿದರು.

Links :