ರೈಫೆಲ್ ಕಳ್ಳರಿಗೆ ಗುಂಡೇಟು: 5 ಮಂದಿ ಬಂಧನ


02-02-2018 481

ಬೆಂಗಳೂರು: ನಗರದಲ್ಲಿ ಮತ್ತೆ ಪೊಲೀಸರ ರಿವಾಲ್ವರ್ ಸದ್ದು ಮಾಡಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿ ಬಂದೂಕು ಕಸಿದು ಪಾರಿಯಾಗಿದ್ದ ಮೂವರು ಆರೋಪಿಗಳ ಮೇಲೆ ಈಶಾನ್ಯ ವಿಭಾಗದ ಪೊಲೀಸರು ಗುಂಡು ಹೊಡೆದು ಐದು ಮಂದಿ ಇದ್ದ ಗ್ಯಾಂಗ್‍ನ್ನು ಬಂಧಿಸಿದ್ದಾರೆ.

ಪೊಲೀಸರ ಗುಂಡೇಟು ತಗುಲಿ ಕಾಲಿಗೆ ಗಾಯಗೊಂಡಿರುವ ಮಧ್ಯಪ್ರದೇಶದ ದಾರ್ ಜಿಲ್ಲೆಯ ಭಗೋಲಿಯ ಆಜಂಬಾಯ್ ಸಿಂಗ್ ಮೊಹೇರ್ (25), ಜಿತೇನ್ ರಾಮ್‍ಸಿಂಗ್ ಪಲಾಷೆ (19) ಹಾಗೂ ಸುರೇಶ್ ಕೋದ್ರಿಯಾ ಮೊಹೇರ್ (19)ವಿಕ್ಟೋರಿಯಾ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಮೂವರ ಜೊತೆಗೆ ಅಜಂಬಾಯ್ ಸಿಂಗ್ ಮೊಹೇರ್ ಹಾಗೂ ರಾಯ್‍ಸಿಂಗ್ (35) ಅವರಿದ್ದ ಗ್ಯಾಂಗ್‍ನ್ನು ಬಂಧಿಸಿ, ತಲೆಮರೆಸಿಕೊಂಡಿರುವ ಇನ್ನು ಮೂವರಿಗಾಗಿ ಮಧ್ಯಪ್ರದೇಶದಲ್ಲಿ ಪೊಲೀಸ್ ತಂಡ ಶೋಧ ನಡೆಸುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಯಲಹಂಕದ ಉಪನಗರದ ಕೆಂಪನಹಳ್ಳಿ ಬಳಿ ಆಶ್ರಯ ಯೋಜನೆಯ ಮನೆಗಳ ಬಳಿ ಆರೋಪಿಗಳು ಅಡಗಿರುವ ಮಾಹಿತಿಯಾಧರಿಸಿ ಇಂದು ಮುಂಜಾನೆ 3.45ರ ವೇಳೆ ವಿದ್ಯಾರಣ್ಯಪುರ ಪೊಲೀಸ್ ಇನ್ಸ್ ಪೆಕ್ಟರ್ ರಾಮಮೂರ್ತಿ, ಪಿಎಸ್‍ಐ ಅಣ್ಣಯ್ಯ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಲು ಮುಂದಾದಾಗ ಪೊಲೀಸರಿಂದ ದೋಚಿದ್ದ ರಿವಾಲ್ವಾರ್ ಹಾಗೂ ಚಾಕು ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ.

ಆದರೂ ಶರಣಾಗುವಂತೆ ಪೊಲೀಸ್ ಅಧಿಕಾರಿಗಳು ವಿನಂತಿಸಿದರಾದರೂ ಮತ್ತೆ ಹಲ್ಲೆಗೆ ಮುಂದಾಗಿದ್ದರಿಂದ ಇನ್ಸ್ ಪೆಕ್ಟರ್ ರಾಮಮೂರ್ತಿ ಹಾಗೂ ಪಿಎಸ್‍ಐ ಅಣ್ಣಯ್ಯ ಆತ್ಮರಕ್ಷಣೆಗಾಗಿ ನಾಲ್ಕು ಸುತ್ತು ಗುಂಡು ಹಾರಿಸಿದ್ದು, ಅದರಲ್ಲಿ ಮೂರು ಗುಂಡುಗಳು ಆಜಂಬಾಯ್ ಸಿಂಗ್ ಮೊಹೇರ್, ಜಿತೇನ್ ರಾಮ್‍ಸಿಂಗ್ ಪಲಾಷೆ ಹಾಗೂ ಸುರೇಶ್ ಕೋದ್ರಿಯಾ ಮೊಹೇರ್ ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾರೆ. ಒಂದು ಗುಂಡು ಗಾಳಿಯಲ್ಲಿ ಹಾರಿದೆ.

ಕೂಡಲೇ ಕುಸಿದು ಬಿದ್ದ ಮೂವರನ್ನು ವಶಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ಅವರ ಜೊತೆಗೆ ಇದ್ದ ಮತ್ತೊಬ್ಬ ಆರೋಪಿ ಅಬುಬಾಯ್ ಸಿಂಗ್ ಮೊಹೇರ್‍ನನ್ನು ಬಂಧಿಸಿ ಕೃತ್ಯ ನಡೆದ ಸ್ಥಳದ ಸ್ವಲ್ಪ ದೂರದಲ್ಲೇ ಅಡಗಿಸಿಟ್ಟಿದ್ದ ಪೊಲೀಸರ 303 ರೈಫಲ್ ಹಾಗೂ 100 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಬಿಲ್ ಎನ್ನುವ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, ಅಪರಾಧ ಹಿನ್ನೆಲೆಯ ಬುಡಕಟ್ಟು ಇದಾಗಿದೆ. ಭಗೋಲಿ ಗ್ರಾಮದ ಬಹುತೇಕ ಮಂದಿ ನಾಲ್ಕೈದು ಮಂದಿಯಂತೆ ತಂಡ ಕಟ್ಟಿಕೊಂಡು ಮಧ್ಯಪ್ರದೇಶ, ಆಂಧ್ರ, ಕೇರಳ, ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆಗಳಿಗೆ ತೆರಳಿ ಮನೆಗಳವು, ಸುಲಿಗೆ ಸೇರಿ ಹಲವು ಅಪರಾಧ ಕೃತ್ಯಗಳಲ್ಲಿ ತೊಡಗಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಕಳೆದ ಜನವರಿ 18ರಂದು ಮುಂಜಾನೆ ಕೊಡಿಗೇಹಳ್ಳಿ ಬಳಿ ಕಳ್ಳತನಕ್ಕೆ ಬಂದು ಬೆನ್ನಟ್ಟಿ ಬಂದ ಪೊಲೀಸ್ ಸಿಬ್ಬಂದಿಗಳಾದ ಪರಮೇಶಪ್ಪ, ಸಿದ್ದಪ್ಪ ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೆಳಗೆ ಬಿದ್ದ ರೈಫಲ್‍ನ್ನು ಕಳವು ಮಾಡಿ ಪರಾರಿಯಾಗಿದ್ದರು.

ಪ್ರಕರಣವನ್ನು ಸವಾಲಾಗಿ ಪರಿಗಣಿಸಿ ಮಧ್ಯಪ್ರದೇಶಕ್ಕೆ ತೆರಳಿದ ಎಸಿಪಿ ಪ್ರಭಾಕರ್ ಬಾರ್ಕಿ ಅವರ ನೇತೃತ್ವದ ವಿಶೇಷ ತಂಡ ಭಗೋಲಿಗೆ ತೆರಳಿ ಆರೋಪಿಗಳನ್ನು ಬಂಧಿಸಲು ಮಧ್ಯಪ್ರದೇಶದ ಪೊಲೀಸರ ನೆರವಿನೊಂದಿಗೆ ಹೋದಾಗ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಮಧ್ಯಪ್ರದೇಶದ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಕಾರ್ಯಾಚರಣೆ ನಡೆಸಿದಾಗ ರಾಮ್‍ಸಿಂಗ್ ಸಿಕ್ಕಿ ಬಿದ್ದ.

ಆತನನ್ನು ಕರೆತಂದು ವಿಚಾರಣೆಗೊಳಪಡಿಸಿ ಪೊಲೀಸರ ರೈಫಲ್ ಕಸಿದು ಹೋದವರ ಮಾಹಿತಿ ಸಂಗ್ರಹಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿಗಳು ಮಧ್ಯಪ್ರದೇಶದಿಂದ ಬಸ್ಸು, ರೈಲುಗಳಲ್ಲಿ ನಗರಕ್ಕೆ ಬಂದು ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಉಳಿದುಕೊಂಡು ನಗರದ ಹೊರ ವಲಯಗಳಿಗೆ ತೆರಳಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ, ಕಳ್ಳತನ ಮಾಡಿ ಮತ್ತೆ ಊರಿಗೆ ತೆರಳುತ್ತಿದ್ದರು.

100 ಪ್ರಕರಣಗಳಲ್ಲಿ ಭಾಗಿ: ಇಲ್ಲಿಯವರೆಗೆ ಮೈಸೂರು, ಬೆಂಗಳೂರು, ತುಮಕೂರು, ಮಂಗಳೂರು, ಉಡುಪಿ, ಆಂಧ್ರಪ್ರದೇಶ, ಕೇರಳ ಮತ್ತಿತರ ಕಡೆಗಳಲ್ಲಿ ರೈಲ್ವೆ ಹಳಿಗಳ ಅಕ್ಕ-ಪಕ್ಕದ ಪ್ರದೇಶಗಳಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ, ಬೀಗ ಮುರಿದು ಕಳವು, ಢಕಾಯಿತಿ ಮಾಡುತ್ತಿದ್ದರು. ಇಲ್ಲಿಯವರೆಗೆ 100ಕ್ಕೂ ಹೆಚ್ಚು ಕನ್ನಗಳವು, ಢಕಾಯಿತಿ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವುದು ಪತ್ತೆಯಾಗಿದೆ.

ಆರೋಪಿಗಳ ಗುಂಪಿನ ರೂವಾರಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಎಸಿಪಿ ಪ್ರಭಾಕರ ಬಾರ್ಕಿ ಅವರು ಮಧ್ಯಪ್ರದೇಶದಲ್ಲಿ ಶೋಧ ನಡೆಸಿದ್ದು, ಆರೋಪಿಗಳಿಗೆ ಸ್ಥಳೀಯರಾದ ಹಮೀದ್ ಹಾಗೂ ಅಫ್ರೇಜ್ ಸಂಪರ್ಕದಲ್ಲಿರುವುದು ಕಂಡು ಬಂದಿದ್ದು, ಅವರನ್ನೂ ಕೂಡ ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಸುನಿಲ್ ಕುಮಾರ್ ವಿವರಿಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Plice 303 rifle ಮಧ್ಯಪ್ರದೇಶ ಗುಂಡೇಟು