ಇವರೆಂಥ ಸಿಎಂ ಹೇಳಿ?


31-01-2018 710

ನಂಬಿದರೆ ನಂಬಿ ಬಿಟ್ಟರೆ ಬಿಡಿ. ಇವರು ಒಂದು ರಾಜ್ಯದ ಮುಖ್ಯಮಂತ್ರಿ. ಅದೂ ಕೂಡ ಒಂದಲ್ಲ ಎರಡಲ್ಲ, ಕಳೆದ 20 ವರ್ಷಗಳಿಂದಲೂ ಇವರೇ ಸಿಎಂ. ಆದರೆ, ಇವರ ಬ್ಯಾಂಕ್ ಖಾತೆಯಲ್ಲಿರುವುದು ಕೇವಲ 2410 ರೂಪಾಯಿಗಳು ಮಾತ್ರ, ಇದೇ ಜನವರಿ 20ರಂದು ಜೇಬಿನಲ್ಲಿದ್ದ ಹಣ ಬರೀ 1520 ರೂಪಾಯಿಗಳಂತೆ. ನಾವು ತ್ರಿಪುರಾ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್‌ ಬಗ್ಗೆ ಮಾತನಾಡುತ್ತಿದ್ದೇವೆ. ಹೌದು, ಈವರೆಗೆ ಒಟ್ಟು 5 ಅವಧಿಗಳಲ್ಲಿ ತ್ರಿಪುರಾದ ಸಿಎಂ ಆಗಿರುವ ಮಾಣಿಕ್ ಸರ್ಕಾರ್, ದೇಶದ ಅತ್ಯಂತ ಗರೀಬ ಮುಖ್ಯಮಂತ್ರಿ ಎಂದು ಹೇಳಬಹುದು.

ಸದ್ಯದಲ್ಲೇ ನಡೆಯಲಿರುವ ತ್ರಿಪುರಾ ವಿಧಾನಸಭೆ ಚುನಾವಣೆಗೆ ಧನ್‌ಪುರ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ವೇಳೆ, ಸರ್ಕಾರ್ ಅವರು ತಮ್ಮ ಆಸ್ತಿಪಾಸ್ತಿ ಬಗ್ಗೆ ಮಾಹಿತಿ ನೀಡಿದ್ದಾರೆ. ತ್ರಿಪುರಾದ ಮುಖ್ಯಮಂತ್ರಿಯಾಗಿರುವ 69 ವರ್ಷದ ಮಾಣಿಕ್ ಸರ್ಕಾರ್ ಅವರ ಪ್ರತಿ ತಿಂಗಳ ವೇತನ 26,315 ರೂಪಾಯಿಗಳು. ಇದಿಷ್ಟೂ ಹಣವನ್ನು ತಮ್ಮ ಪಕ್ಷವಾಗಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಕ್ಕೆ(ಮಾರ್ಕ್ಸ್‌ವಾದ) ದೇಣಿಗೆಯಾಗಿ ಕೊಟ್ಟು ಬಿಡುತ್ತಾರೆ. ಪಕ್ಷದವರು ಇವರಿಗೆ ಜೀವನ ನಿರ್ವಹಣೆಗಾಗಿ ತಿಂಗಳಿಗೆ 9,700 ರೂಪಾಯಿ ಕೊಡುತ್ತಾರಂತೆ. ಇದನ್ನು ಬಿಟ್ಟರೆ ಸರ್ಕಾರ್ ಅವರಿಗೆ ಅಗರ್ತಲಾದಲ್ಲಿ 0.01 ಎಕರೆಯಷ್ಟು ಪಿತ್ರಾರ್ಜಿತ ಆಸ್ತಿ ಇದೆಯಂತೆ.

ಮಾಣಿಕ್ ಸರ್ಕಾರ್ ಪತ್ನಿ ಪಾಂಚಾಲಿ ಭಟ್ಟಾಚಾರ್ಜಿ ನಿವೃತ್ತ ಬ್ಯಾಂಕ್ ಉದ್ಯೋಗಿ. ಇವರ ಬ್ಯಾಂಕ್ ಅಕೌಂಟಿನಲ್ಲಿ 12 ಲಕ್ಷ ರೂಪಾಯಿಗಳಿವೆಯಂತೆ. ಇವರು, ಇತರೆ ಸಾಮಾನ್ಯ ಜನರಂತೆ ಬಸ್ಸು ಮತ್ತು ಆಟೋಗಳಲ್ಲಿ ಓಡಾಡುತ್ತಾರಂತೆ. ಅತ್ಯಂತ ಸರಳ ಜೀವನ ನಡೆಸುವ ಮಾಣಿಕ್ ಸರ್ಕಾರ್ ಬಳಿ ಮೊಬೈಲ್ ಫೋನ್ ಇಲ್ಲ ಮತ್ತು ಇವರು ಇ-ಮೇಲ್ ಅಕೌಂಟ್‌ ಕೂಡ ಹೊಂದಿಲ್ಲ. ಮೊಬೈಲ್ ಫೋನೇ ಇಲ್ಲದೇ ಇದ್ದ ಮೇಲೆ ಫೇಸ್ ಬುಕ್, ವಾಟ್ಸಾಪ್ ಅಕೌಂಟುಗಳು ಎಲ್ಲಿಂದ ಬರಬೇಕು ಹೇಳಿ. ಒಟ್ಟಿನಲ್ಲಿ, ಇದು ನಂಬುವುದು ಕಷ್ಟವಾದರೂ ಸತ್ಯ ಸಂಗತಿ.

ಅಂದಹಾಗೆ, ನಮ್ಮ ಸಮಾಜವಾದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂಗಳಾದ ಯಡಿಯೂರಪ್ಪ, ಕುಮಾರ ಸ್ವಾಮಿ ಇವರುಗಳೂ ಕೂಡ ಸರಳ ಜೀವಿಗಳೇ ತಾನೇ? ಹೀಗಾಗಿ ಇವರು ಅಂಥ ಹೆಚ್ಚಿನ ಆಸ್ತಿ ಪಾಸ್ತಿ ಏನೂ ಮಾಡಿಕೊಂಡಿರಲಿಕ್ಕಿಲ್ಲ. ನೀವೇನಂತೀರಿ? ಮೇರಾ ಭಾರತ್ ಮಹಾನ್..!


ಒಂದು ಕಮೆಂಟನ್ನು ಬಿಡಿ