ಬಿಜೆಪಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ರೆಡ್ದಿ


29-01-2018 881

ಬೆಂಗಳೂರು: ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಮುಸ್ಲಿಮರ ಮತಗಳನ್ನು ವಿಭಜಿಸಿದಂತೆ ಕರ್ನಾಟದಲ್ಲೂ ಒಡೆಯಲು ಬಿಜೆಪಿಯರು ಪಿಎಫ್‍ಐ, ಎಸ್‍ಡಿಪಿಐನಂತಹ ಸಂಘಟನೆಗಳ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಬಾಂಬ್ ಸಿಡಿಸಿದ್ದಾರೆ.

ಹೈದ್ರಾಬಾದ್‍ನಲ್ಲಿ ಮುಸ್ಲಿಂ ಮುಖಂಡ ಓವೈಸಿ ಜತೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿರುವುದು ಹೊಸ ಸಂಗತಿಯೇನೂ ಅಲ್ಲ. ಈ ಕುರಿತು ಈಗಾಗಲೇ ನಮಗೂ ಮಾಹಿತಿ ಬಂದಿದೆ. ಅದರೊಂದಿಗೆ ಕರ್ನಾಟಕದಲ್ಲಿ ಮುಸ್ಲಿಮರ ಮತ ಒಡೆಯಲು ಅದು ಪಿಎಫ್‍ಐ ಹಾಗೂ ಎಸ್‍ಡಿಪಿಐ ಜತೆ ಒಪ್ಪಂದ ಮಾಡಿಕೊಂಡಿದೆ.ಈ ಕುರಿತು ಅಗತ್ಯದ ದಾಖಲೆಗಳನ್ನು ಬಿಡುಗಡೆ ಮಾಡಲು ಸಿದ್ಧ ಎಂದು ಹೇಳಿದ್ದಾರೆ. ಈ ಮಧ್ಯೆ ಓವೈಸಿ ಜತೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಕುರಿತು ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಒಡೆಯುವ ಕಾಯಕವನ್ನೇ ಮುಖ್ಯವಾಗಿಸಿಕೊಂಡವರು ಹೀಗೆ ಒಳ ಒಪ್ಪಂದ ಮಾಡಿಕೊಂಡರೆ ಸಮಾಜದ ಗತಿಯೇನು? ಎಂದು ಪ್ರಶ್ನೆ ಮಾಡಿದ್ದಾರೆ

ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲೂ ಇದೇ ರೀತಿ ಒಳ ಒಪ್ಪಂದ ಮಾಡಿಕೊಂಡು ಮುಸ್ಲಿಮರ ಮತಗಳನ್ನು ಒಡೆದರು. ಈಗ ಹೈದ್ರಾಬಾದ್‍ನಲ್ಲಿ ಒಪ್ಪಂದ ಮಾಡಿಕೊಂಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದಿದ್ದಾರೆ. ಆರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ಚುನಾವಣೆ ಸಂಬಂಧ ಬಿಜೆಪಿ ಹಾಗೂ ಓವೈಸಿ ನಡುವೆ ಒಪ್ಪಂದವಾಗಿರುವ ಕುರಿತು ನಮಗೂ ಮಾಹಿತಿ ಬಂದಿದೆ ಎಂದರು.

ಅಧಿಕಾರಕ್ಕಾಗಿ ಬಿಜೆಪಿಯವರು ಯಾವ ಮಾರ್ಗವನ್ನಾದರೂ ಹಿಡಿಯುತ್ತಾರೆ. ಇದೇ ರೀತಿ ಹೊಂದಾಣಿಕೆ ಮಾಡಿಕೊಂಡು ಅವರು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರು. ಹಾಗೆಯೇ ಕರ್ನಾಟಕ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಇದೇ ರೀತಿ ಒಪ್ಪಂದ ಮಾಡಿಕೊಂಡು ಮುಸ್ಲಿಮರ ಮತ ಒಡೆಯುತ್ತಿದ್ದಾರೆ ಎಂದರು. ಕರ್ನಾಟಕದಲ್ಲೂ ಮುಂದಿನ ವಿಧಾನಸಭಾ ಚುನಾವಣೆ ಗೆಲ್ಲಲು ಪಿಎಫ್‍ಐ ಹಾಗೂ ಎಸ್‍ಡಿಪಿಐ ಸಂಘಟನೆಗಳ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಕುರಿತು ದಾಖಲೆ ಬೇಕಿದ್ದರೆ ಒದಗಿಸುತ್ತೇನೆ ಎಂದರು. ನಾವು ಯಾವತ್ತೂ ಈ ಸಂಘಟನೆಗಳ ಜತೆ ಹೋಗಿಲ್ಲ.ಆದರೆ ಬಿಜೆಪಿಯವರು ತಾವು ಒಪ್ಪಂದ ಮಾಡಿಕೊಂಡು ಕಾಂಗ್ರೆಸ್‍ನವರು ಒಪ್ಪಂದ ಮಾಡಿಕೊಂಡರು ಎಂದು ಗುಲ್ಲೆಬ್ಬಿಸುತ್ತಾರೆ ಎಂದು ಟೀಕಿಸಿದರು. ಹೀಗೆ ಸಮಾಜದಲ್ಲಿ ಸುಳ್ಳು ಸುದ್ದಿಗಳನ್ನು ಹರಡಿ ರಾಜಕೀಯ ಲಾಭ ಮಾಡಿಕೊಳ್ಳುವುದು ಬಿಜೆಪಿಯ ಗುಣ. ಕರ್ನಾಟಕದಲ್ಲೇ ಸವಣೂರು ಗ್ರಾಮಪಂಚಾಯ್ತಿಯಲ್ಲಿ ಪಿಎಫ್‍ಐ ಜತೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ಅಧಿಕಾರ ಹಿಡಿದಿದೆ ಎಂದು ದೂರಿದರು.

ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಇಚ್ಚಿಸದ ರಾಮಲಿಂಗಾರೆಡ್ಡಿ, ಪೋಲೀಸರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮಾತನಾಡಿ, ಪರಮೇಶ್ವರ್ ಅವರು ಗೃಹ ಸಚಿವರಾಗಿದ್ದಾಗ ಈ ಸಂಬಂಧ ಔರಾದ್‍ಕರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು ಎಂದರು. ಆ ಸಮಿತಿ ನೀಡಿದ ಶಿಫಾರಸಿನಂತೆ ವೇತನ ಹೆಚ್ಚಳ ಆಗುತ್ತದೆ ಎಂದ ಅವರು, ಪೋಲೀಸ್ ಇಲಾಖೆಯಲ್ಲಿ ಬಹಳ ಹಿಂದಿನಿಂದಲೂ ನೇಮಕಾತಿಗಳು ನಿಂತು ಹೋಗಿದ್ದವು. ನಾವು ಬಂದ ನಂತರ ನಿರಂತರವಾಗಿ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಹೇಳಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Ramalinga Reddy PFI ಓವೈಸಿ ಮಹಾರಾಷ್ಟ್ರ