ಚಂದನ್ ಶೆಟ್ಟಿ ಬಿಗ್ ಬಾಸ್ ಗೆದ್ದಿದ್ದು ಹೇಗೆ ?


28-01-2018 13194

ಕನ್ನಡ ಟಿವಿ ಲೋಕ ಟಿ ಆರ್ ಪಿ ರಾದ್ಧಾಂತದಲ್ಲಿ ಸಿಕ್ಕಿಹಾಕಿಕೊಂಡಿರುವ ಬೆನ್ನಲ್ಲೇ ಈಗ ಮತ್ತೊಂದು ವಿಷಯದ ಬಗ್ಗೆ ಜನ ಅನುಮಾನ ವ್ಯಕ್ತ ಪಡಿಸಲು ಆರಂಭಿಸಿದ್ದಾರೆ. ಅನೇಕ ರಿಯಾಲಿಟಿ ಶೋಗಳಲ್ಲಿ ವಿಜೇತರನ್ನು ವೀಕ್ಷಕರ ವೋಟಿನ ಆಧಾರಾದ ಮೇಲೆ ನಿರ್ಧರಿಸಲಾಗುತ್ತದೆ. ಹಾಗೇ ಕನ್ನಡ ಬಿಗ್ ಬಾಸ್ ನ ಐದನೇ ಆವೃತ್ತಿಯಲ್ಲೂ ವೀಕ್ಷಕರ ವೋಟಿನ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಿರುವುದು ವೀಕ್ಷಕರಿಗೇ ಶಾಕ್ ನೀಡಿದೆ.

ಅನೇಕ ಬಾರಿ ಅನೇಕ ಇಂಥಾ ರಿಯಾಲಿಟಿ ಶೋಗಳಲ್ಲಿ ಗೆಲ್ಲುತ್ತಾರೆಂದು ಜನ ಅಂದುಕೊಂಡಿದ್ದೇ ಯಾರೋ ಆದರೆ ಗೆದ್ದಿದ್ದೇ ಯಾರೋ ಎಂಬುದು ಈಗಾಗಲೇ ಜಗಜ್ಜಾಹೀರಾಗಿರುವ ವಿಚಾರ. ಈ ಬಾರಿ ಫೈನಲ್ಗೆ ತಲುಪಿದ ಇಬ್ಬರು ಕಾಂಟೆಸ್ಟೆಂಟ್ ಗಳ ಪೈಕಿ ಒಬ್ಬರೂ ಗೆಲ್ಲುವ ಮಟ್ಟಕ್ಕೆ ಇದ್ದವರಲ್ಲ ಎಂದು ಜನ ಹೇಳುತ್ತಿದ್ದಾರೆ. ಆದರೂ ಈ ಫೈನಲ್ ಬರುವುದಕ್ಕೆ ಕೆಲವು ವಾರಗಳ ಮೊದಲೇ 'ಚಂದನ್ ಗೆಲ್ಲುತ್ತಾರಂತೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದುದು ಯಾಕೆ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಹಾಗೆ ನೋಡಿದರೆ ಚಂದನ್ ಅಂಥಾ ಆಟಗಾರನೇನೂ ಆಗಿರಲಿಲ್ಲ. ಅದೇ ರಾಗ ಅದೇ ಹಾಡು ಎಂಬ ಧಾಟಿಯಲ್ಲಿ ದಿನಕ್ಕೊಂದು ಹಾಡು ಹಾಡಿದ್ದು ಬಿಟ್ಟರೆ ಆತನ ಬೇರೆ ಸಾಧನೆಗಳೇನೂ ಇರಲಿಲ್ಲ. ಜನರನ್ನು ಸೆಳೆಯಲು ಚಂದನ್ ಏನಾದರೂ ಮಾಡಿದ್ದು ಇದೆ ಎಂದರೆ ಅದು ಕನ್ನಡ ಭಾಷೆಯ ಬಗ್ಗೆ ವಿಪರೀತ ಅಭಿಮಾನ ವಿರುವಂತೆ ಮಾತನಾಡಿದ್ದು ಮತ್ತು ಮುಂದಿನ ಜನ್ಮಗಳಲ್ಲೂ ಕನ್ನಡ ನಾಡಲ್ಲೇ ಹುಟ್ಟಬೇಕೆಂದು ಆಗಾಗ ಹೇಳುತ್ತಿದ್ದುದು. ಕನ್ನಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುತ್ತೀನಿ ಎಂದು ಹೇಳುವ ಚಂದನ್ ಈಗಾಗಲೇ ಹೆಂಡ ಮತ್ತು ಬಾರ್ ಗಳ ಬಗ್ಗೆಯೇ ಹಾಡುಗಳನ್ನು ಹಾಡಿರುವುದನ್ನು ಮರೆತಂತಿದೆ. ಹೆಂಡದ ಹಾಡುಗಳ ಮೂಲಕ ಕನ್ನಡದ ಕೀರ್ತಿ ಪತಾಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರುವುದು ಬೇಡ ಎಂದು ಸಭ್ಯ ಕನ್ನಡಿಗರು ತಮ್ಮ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಹಾಗಾದರೆ ಜೆ ಕೆ ಯಾಕೆ ಗೆದ್ದಿಲ್ಲ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಕಳೆದ ಬಾರಿಯ ಬಿಗ್ ಬಾಸ್ ನಲ್ಲಿ ಪಡ್ಡೆಗಳ ಬೆಂಬಲದೊಂದಿಗೆ ಪ್ರಥಮ್ ಗೆದ್ದ ಎಂದು ಹೇಳಬಹುದಾದರೂ ಸುಮಾರು ಅದೇ ಹಿನ್ನೆಲೆಯಿಂದ ಬಂದಿರುವ ದಿವಾಕರ್ ಅನ್ನು ಜನ ಯಾಕೆ ಗೆಲ್ಲಿಸಬೇಕು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಆರಂಭದಲ್ಲೇ ಈ ಬಿಗ್ ಬಾಸ್ ನಲ್ಲಿ ಫೈನಲ್ ತಲುಪುವುದು ಜೆ ಕೆ, ಚಂದನ್, ದಿವಾಕರ್ ಮತ್ತು ಅನುಪಮಾ ಎಂದು ಮಾತಾಡಿಕೊಳ್ಳಲಾಗಿತ್ತು. ಅದೇ ರೀತಿ ಬಿಗ್ ಬಾಸ್ ಪೂರ್ಣಗೊಂಡಿದೆ. ಇದೆಲ್ಲ ನೋಡಿದರೆ ಆಡಿಯನ್ಸ್ ವೋಟ್ ಅನ್ನೋದು ಏನೂ ಇಲ್ಲ ಇದೆಲ್ಲ ಒಂದು ರೀತಿಯಲ್ಲಿ ಪೂರ್ವ ನಿರ್ಧಾರಿತ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.

ಬೇರೆ ಚಾನಲ್ ಗಳ  ಕಥೆ ಹೇಗೇ ಇರಲಿ ಆದರೆ ನಾವು ಯಾವುದೇ ಅಕ್ರಮ ಮಾಡುವುದಿಲ್ಲ ಎಂಬಂತೆ ಬಿಂಬಿಸಿಕೊಳ್ಳುವ ಕಲರ್ಸ್ ಕನ್ನಡ, ಇಂದಿನವರೆಗೆ ಯಾರಿಗೆ ಎಷ್ಟು ಮತಗಳು ಬಂದಿದೆ ಎಂದು ಯಾಕೆ ಹೇಳಿಲ್ಲ? ಅಷ್ಟು ವೋಟ್ ಗಳಲ್ಲಿ ಕ್ರಮಬದ್ಧ ವೋಟ್ ಗಳು ಎಷ್ಟು ಅಕ್ರಮ ವೋಟ್ ಗಳು ಎಷ್ಟು ಎಂದು ಯಾಕೆ ಬಹಿರಂಗ ಮಾಡುತ್ತಿಲ್ಲ? ಹಾಗೇ ನಿಜವಾಗಲೂ ಜನ ವೋಟ್ ಮಾಡುತ್ತಿದ್ದಾರಾ ಇಲ್ಲವ ಅಂತಾನೂ ಯಾಕೆ ಹೇಳುತ್ತಿಲ್ಲ ಎಂದು ಜನ ಕೇಳುವಂತಾಗಿದೆ. ಇದು ಟಿ ಆರ್ ಪಿ ರೀತಿಯಲ್ಲೇ ಜನರ ಕಣ್ಣಿಗೆ ಮಣ್ಣೆರೆಚುವ ಇನ್ನೊಂದು ಆಟವಾ ಎಂದು ಜನ ಅನುಮಾನಪಡಲು ಆರಂಭಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ