'ಬಿಜೆಪಿಯ ಹೊಸ ಘೋಷವಾಕ್ಯ’


23-01-2018 748

ಉಡುಪಿ: ಕರ್ನಾಟಕ ಚುನಾವಣೆಗೆ ಬಿಜೆಪಿಯು ಹೊಸ ಘೋಷವಾಕ್ಯ ನೀಡಿದೆ.  ಕೇಂದ್ರ ಸಚಿವ ಹಾಗು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ ಜಾವ್ಡೇಕರ್ 'ಕರ್ನಾಟಕದ ವಿಕಾಸ ಜೋಡಿ ಯಡಿಯೂರಪ್ಪ-ಮೋದಿ' ಎಂದಿದ್ದಾರೆ. ಉಡುಪಿಯ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಈ ಘೋಷಣೆ ನೀಡಿದ್ದಾರೆ.

ಸಭೆಯಯಲ್ಲಿ ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎಂದು ನಾಡಗೀತೆಯ ಸಾಲನ್ನೂ ಹಾಡಿದರು. ತದನಂತರ ಇದು ಮಹತ್ವದ ಚುನಾವಣೆ, ನೂರು ದಿನಗಳ ಬಳಿಕ ಕರ್ನಾಟಕದಲ್ಲಿ ಕಾಂಗ್ರೇಸ್ ಆಡಳಿತ ಮುಗಿಯಲಿದೆ, ಇದು ಎರಡು ಸಂಸ್ಕೃತಿಗಳ ಸಂಘರ್ಷ ಎಂದು ಅವರು ಹೇಳಿದ್ದಾರೆ.

ಅಹಿಂದ ಎನ್ನುವ ಸಿದ್ದರಾಮಯ್ಯ, ಭ್ರಷ್ಟಾಚಾರ ಬಿಟ್ಟು ಏನೂ ಮಾಡಿಲ್ಲ. ರಾಜ್ಯದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತರ ಕೊಲೆಗಳಾಗಿವೆ. ಕಾಂಗ್ರೇಸ್ ಸರ್ಕಾರ ಮಾತ್ರ ಪಿ.ಎಫ್.ಐ ವಿರುದ್ಧದ ಕೇಸು ವಾಪಾಸು ಪಡೆಯುತ್ತೆ, ರಾಜ್ಯ ಸರ್ಕಾರ ಭಯೋತ್ಪಾದಕರ ಜೊತೆ ಕೈಜೋಡಿಸಿದೆ ಎಂದು ಆಪಾದಿಸಿದ್ದಾರೆ. ಟಿಪ್ಪು ಜಯಂತಿ ಮಾಡುತ್ತಾರೆ, ವಿವೇಕಾನಂದ ಜಯಂತಿ ಮಾಡಲ್ಲ. ಎಸ್.ಡಿ.ಪಿ.ಐ ಬೇಕು ಮುಸ್ಲೀಮರು ಬೇಡ ಎಂಬಂತಾಗಿದೆ ಎಂದು ಕಿಡಿಕಾರಿದರು ಅವರು ಶಾದಿ ಭಾಗ್ಯವೂ ಸರಿಯಾಗಿ ಜಾರಿಯಾಗಿಲ್ಲ ಎಂದರು.

ಸಿದ್ದರಾಮಯ್ಯ ಕೃಷ್ಣಮಠಕ್ಕೆ ಬರಲ್ಲ, ಈಗ ರಾಹುಲ್ ಗಾಂಧಿ ಮಠಕ್ಕೆ ಬರ್ತಾರಂತೆ, ಜನರಿಗೆ ಭಕ್ತಿಗೂ ರಾಜಕೀಯಕ್ಕೂ ವ್ಯತ್ಯಾಸ ಗೊತ್ತು, ನಿಜ ಭಕ್ತರು ಯಾರು ಅಂತ ದೇವರಿಗೂ ಚೆನ್ನಾಗಿ ಗೊತ್ತು, ಗುಜರಾತ್ ನಲ್ಲೂ ಟೆಂಪಲ್ ರನ್ ಕಾಂಗ್ರೆಸ್ ಕೈ ಹಿಡಿಯಲಿಲ್ಲ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ನಾನೂ ಹಿಂದೂ ಅಂತಾರೆ, ಚುನಾವಣೆ ಬಂದಾಗ ಇವರಿಗೆ ದೇವಾಲಯ ನೆನಪಾಗುತ್ತೆ ಎಂದರು. ಇನ್ನು  ಅಧಿಕಾರಿಗಳ ವರ್ಗಾವಣೆ ಕಾನೂನು ಬಾಹಿರ, ದಕ್ಷಿಣ ಕನ್ನಡ ಎಸ್ಪಿ ಮರಳುಗಾರಿಕೆ ಮಟ್ಟಹಾಕಿದ್ದಾರೆ ಅದಕ್ಕಾಗಿ ವರ್ಗ ಮಾಡಿದ್ದಾರೆ.  ಹಾಸನ ಡಿಸಿ ರೋಹಿಣಿ ಸಿಂಧೂರಿ ಅನಗತ್ಯ ವರ್ಗ, ಇದು ಚುನಾವಣಾ ಆಯೋಗದ ನಿಯಮಾವಳಿಗೆ ವಿರುದ್ಧ, ಚುನಾವಣಾ ತಯಾರಿಯ ವೇಳೆ ವರ್ಗ ಮಾಡಬಾರದು ಎಂದು ಆಯೋಗ ಹೇಳುತ್ತದೆ ಎಂದರು.

ಮಹದಾಯಿ ವಿಚಾರವಾಗಿ ಮಾತನಾಡಿದ ಅವರು, ವಿವಾದ ನ್ಯಾಯಾಲಯದಲ್ಲಿದೆ, ಈ ಕುರಿತಂತೆ ಮನ ಮೋಹನ್ ಸಿಂಗ್ ಸರ್ಕಾರ ಕೋರ್ಟ್ಗೆ ಹೋಗಿತ್ತು, ಅಧಿಕಾರ ಇದ್ದಾಗ ಸೋನಿಯಾ ಗಾಂಧಿ ತುಟಿಪಿಟಕ್ ಅಂದಿಲ್ಲ ಎಂದು ಆರೋಪಿಸಿದರು. ಕರ್ನಾಟಕಕ್ಕೆ ಕುಡಿಯುವ ನೀರು ಕೊಡುತ್ತೇವೆ ಅಂದಿದ್ದರು ಪರಿಕ್ಕರ್, ವಂದನೆ ಹೇಳುವ ಬದಲು ಬಂದ್ ಮಾಡಿಸುತ್ತಿದ್ದೀರಾ, ಗೋವಾ ವಿಪಕ್ಷ ನಾಯಕರ ಮನವೊಲಿಸಿ, ನಾವು ಪರಿಕ್ಕರ್ ಮನವೊಲಿಸುತ್ತೇವೆ ಎಂದು ಸವಾಲೆಸೆದಿದ್ದಾರೆ.


ಒಂದು ಕಮೆಂಟನ್ನು ಬಿಡಿ