ಐಪಿಎಸ್ ಅಧಿಕಾರಿ ಭಾಷಣ ವೈರಲ್


16-01-2018 908

ಬೆಂಗಳೂರು: ರಾಜಕಾರಣಿಗಳ ಮುಲಾಜಿಗೆ ಒಳಗಾಗದೇ, ವರ್ಗಾವಣೆ ಭೀತಿಯಿಂದ ದೂರವಿದ್ದಲ್ಲಿ ಸರ್ಕಾರಿ ಅಧಿಕಾರಿಗಳು ಯಾವುದೇ ಅಂಜಿಕೆ, ಅಳುಕಿಲ್ಲದೆ ಸಂವಿಧಾನದತ್ತವಾದ ಕೆಲಸ ಮಾಡಲು ಸಾಧ್ಯ ಎಂದು ಗೃಹರಕ್ಷಕ ದಳದ ಪೊಲೀಸ್ ಮಹಾ ನಿರೀಕ್ಷಕಿ(ಐಜಿಪಿ) ಹಿರಿಯ ಐಪಿಎಸ್ ಅಧಿಕಾರಿ ರೂಪಾ ಮುದ್ಗಲ್ ಸಮಾರಂಭವೊಂದರಲ್ಲಿ ಭಾಷಣ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ರೂಪಾ ಅವರ ಭಾಷಣದ ವಿಡಿಯೋ ವೀಕ್ಷಿಸಿರುವ ಸಾವಿರಾರು ಮಂದಿ ಲೈಕ್ ಮಾಡಿ ವಿಡಿಯೋ ಶೇರ್ ಮಾಡಿದ್ದಾರೆ. ಇದನ್ನು ವೀಕ್ಷಿಸಿರುವ ರಾಜ್ಯದ ಹಿರಿಯ ಮಹಿಳಾ ಐಎಎಸ್ ಅಧಿಕಾರಿ ಶಾಲೀನಿ ರಜನೀಶ್ ಈ ವಿಡಿಯೋವನ್ನು ತಮ್ಮ ಫೇಸ್ ಬುಕ್ ನಲ್ಲಿ  ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾಷಣದ ವಿವರ: ಬೆಂಗಳೂರು ನಗರ ಸಿಎಆರ್ ವಿಭಾಗದ ಜಂಟಿ ಪೊಲೀಸ್ ಆಯುಕ್ತೆಯಾಗಿ ಕೆಳ ವರ್ಷಗಳ ಹಿಂದೆ ಅಧಿಕಾರ ಸ್ವೀಕರಿಸಿದ ಬಳಿಕ ಹುದ್ದೆಯ ಜವಾಬ್ದಾರಿಯಂತೆ ಅಲ್ಲಿನ ಪೊಲೀಸ್ ಸಿಬ್ಬಂದಿ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾದೆ. ಆಗ ಅಗತ್ಯಕ್ಕಿಂತ ಹೆಚ್ಚು ಮಂದಿ ಪೊಲೀಸ್ ಸಿಬ್ಬಂದಿಯನ್ನು ರಾಜಕಾರಣಿಗಳ ಅಂದರೆ ಎಂ.ಎಲ್.ಎ, ಎಂ.ಎಲ್.ಸಿ ಹಾಗೂ ಎಂ.ಪಿ.ಗಳ ಗನ್‍ಮ್ಯಾನ್‍ಗಳನ್ನಾಗಿ ನೇಮಿಸಿರುವುದು. ಪಟ್ಟಿ ಮಾಡಿದಾಗ 82 ಮಂದಿ ರಾಜಕಾರಣಿಗಳು 216 ಮಂದಿ ಗನ್ ಮ್ಯಾನ್‍ಗಳನ್ನು ಹೊಂದಿರುವುದು ತಿಳಿಯಿತು.

ಇದು ನಿಯಮ ಭಾಹಿರವಾಗಿತ್ತು. ಕೂಡಲೇ ಹೆಚ್ಚುವರಿ ಸಿಬ್ಬಂದಿಯನ್ನು ಹಿಂಪಡೆಯಲು ಮುಂದಾದಾಗ ಮೊದಲಿಗೆ ಪ್ರತಿರೋಧ ವ್ಯಕ್ತವಾದದ್ದೇ ನನ್ನ ಮೇಲಾಧಿಕಾರಿಯಿಂದ. ಸಹೊದ್ಯೋಗಿಗಳ ಸಮ್ಮುಖದಲ್ಲೇ ಕ್ರಮಕ್ಕೆ ಮುಂದಾಗದಂತೆ ಒತ್ತಡ ಹೇರಿದರು. ಆದರೂ ನಾನು ಯಾವುದಕ್ಕೂ ಮಣಿಯದೆ ಕಾನೂನು ಹೇಳಿದಂತೆ ಕ್ರಮ ಜರುಗಿಸಿ ಅಷ್ಟು ಮಂದಿ ಹೆಚ್ಚುವರಿ ಸಿಬ್ಬಂದಿಯನ್ನು ಹಿಂದಕ್ಕೆ ಪಡೆದೆ.

ಅದೇ ರೀತಿ ಕರ್ನಾಟಕದ ಮುಖ್ಯಮಂತ್ರಿಯೊಬ್ಬರು ಅಧಿಕಾರ ಕಳೆದುಕೊಂಡು ಮಾಜಿಯಾಗಿದ್ದರು ಸರಕಾರದ ಎಂಟು ಬ್ರಾಂಡ್ ನ್ಯೂ ಎಸ್.ಯು.ವಿ ವಾಹನಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು ಉಪಯೋಗಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ವಾಹನಗಳನ್ನು ಹಿಂಪಡೆಲು ಮುಂದಾದೆ.  ಆಗಲು ಸಹ ಸವಾಲು ಎದುರಿಸಬೇಕಾಯಿತು. ಆದರೂ ಛಲ ಬಿಡದೆ ಕರ್ತವ್ಯ ನಿಭಾಯಿಸಿದೆ. ಆಶ್ಚರ್ಯವೆಂದರೆ ಈ ಹಿಂದೆ ನನ್ನ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಯಾಕೆ ಆ ಮಾಜಿ ಮುಖ್ಯಮಂತ್ರಿಗಳ ವಶದಿಂದ ಸರಕಾರದ ವಾಹನಗಳನ್ನು ಹಿಂಪಡೆಯಲು ಪ್ರಯತ್ನಸಿಲಿಲ್ಲ ಎಂಬುದು.

ಅಧಿಕಾರಿಗಳಿಗೆ ಸಂವಿಧಾನದತ್ತವಾದ ರಕ್ಷಣೆ ಇದೆ. ಆದರೆ ಪಾದರ್ಶಕವಾಗಿ, ಕಾನೂನಾತ್ಮಕವಾಗಿ ಯಾರ ಮುಲಾಜಿಗೂ ಒಳಗಾಗದೆ ಕರ್ತವ್ಯ ನಿರ್ವಹಿಸಬೇಕು. ಆಗ ಸಂವಿಧಾನದ ಆರ್ಟಿಕಲ್ 311 ಅಡಿ ಯಾವುದೇ ಅಧಿಕಾರಿಗಾದರು ರಕ್ಷಣೆ ಇದ್ದೇ ಇರುತ್ತದೆ. ಕಡೇ ಮಾತು, ರಾಜಕಾರಣಿಗಳ ಹಾಗೂ ವರ್ಗಾವಣೆ  ಫೋಬಿಯಾದಿಂದ ಹೊರ ಬನ್ನಿ. ಎಲ್ಲಿಗೆ ವರ್ಗಮಾಡಿದರು ಸರಿ ತೆರಳಿ ಕರ್ತವ್ಯ ನಿರ್ವಹಿಸುವೆ ಎಂಬ ರೀತಿ ಬಟ್ಟೆ-ಬರೆ ಸೂಟ್ ಕೇಸ್ ಸಿದ್ಧಪಡಿಸಿಟ್ಟುಕೊಳ್ಳಿ. ಆಗ ನೀವು ಯಾರಿಗೂ, ಯಾವುದಕ್ಕೂ ಹೆದರಬೇಕಾಗಿಲ್ಲ. ತಲೆ ಬಾಗಬೇಕಿಲ್ಲ ಎಂದು ಹೇಳಿರುವುದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

roopa moudgil IPS ಒತ್ತಡ ಭಾಷಣ