ಥಿಯೇಟರ್‌ಗಳಲ್ಲಿ ಜನಗಣಮನ ಕಡ್ಡಾಯವಿಲ್ಲ…


09-01-2018 392

ತನ್ನದೇ ತೀರ್ಪನ್ನು ಬದಲಾಯಿಸಿದ ಸುಪ್ರೀಂಕೋರ್ಟ್, ಸಿನೆಮಾ ಥಿಯೇಟರ್‌ಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯವಲ್ಲ ಎಂದು ಹೇಳಿದೆ. ಭಾರತೀಯರಲ್ಲಿ ರಾಷ್ಚ್ರೀಯತೆ ಮತ್ತು ದೇಶಪ್ರೇಮ ಮೂಡಿಸುವ ಸಲುವಾಗಿ, ಎಲ್ಲ ಸಿನೆಮಾ ಥಿಯೇಟರ್‌ಗಳಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಬೇಕು ಎಂದು ಸುಪ್ರೀಂಕೋರ್ಟ್ 2016ರ ನವೆಂಬರ್‌ನಲ್ಲಿ ಆದೇಶಿಸಿತ್ತು. ಶ್ಯಾಮ್ ನಾರಾಯಣ್ ಚೌಕ್ಸೆ ಎಂಬ ವ್ಯಕ್ತಿ, ದೇಶದ ಎಲ್ಲ ಸಿನೆಮಾ ಹಾಲ್‌ಗಳಲ್ಲಿ ಪ್ರತಿಯೊಂದು ಶೋ ಆರಂಭವಾಗುವ ಮುನ್ನ ರಾಷ್ಟ್ರಗೀತೆ ಹಾಡಲು ನಿರ್ದೇಶಿಸಬೇಕೆಂದು ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಿದ್ದರು. ಆ ಬಳಿಕ ಕೋರ್ಟ್ ನೀಡಿದ್ದ ತೀರ್ಪು ವಿವಾದಕ್ಕೆ ಕಾರಣವಾಗಿತ್ತು ಮತ್ತು ದೇಶಾದ್ಯಂತ ಚರ್ಚೆ ಹುಟ್ಟುಹಾಕಿತ್ತು. ದೇಶಪ್ರೇಮ ಅನ್ನುವುದನ್ನು ಯಾವಾಗಲೂ ನಮ್ಮ ತೋಳುಗಳ ಮೇಲೆ ಧರಿಸಿಕೊಂಡು ತೋರಿಸುತ್ತಿರಬೇಕು ಎನ್ನುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು. ಆ ನಂತರ, ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಂದ್ರ ಸರ್ಕಾರವನ್ನು ಕೋರ್ಟ್ ಕೇಳಿತ್ತು. ಸಿನೆಮಾ ಥಿಯೇಟರ್‌ಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿರುವ ತೀರ್ಪನ್ನು ಮಾರ್ಪಾಡು ಮಾಡಬೇಕೆಂದು, ಕೇಂದ್ರ ಸರ್ಕಾರ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು ಮತ್ತು ಆ ಬಗ್ಗೆ ಕೇಂದ್ರ ಸಚಿವರ ತಂಡ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ ಎಂದು ಹೇಳಿತ್ತು. ಸರ್ಕಾರದ ನಿಲುವನ್ನು ಒಪ್ಪಿರುವ ಕೋರ್ಟ್, ಈ ಹಿಂದೆ ತಾನು ನೀಡಿದ್ದ ಆದೇಶವನ್ನು ಮಾರ್ಪಾಡುಗೊಳಿಸಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

National anthem supreme court ಸರ್ಕಾರ ದೇಶಪ್ರೇಮ