‘ನಾನು ಮತ್ತೆ ಹೋರಾಟಕ್ಕೆ ಧುಮುಕುತ್ತಿದ್ದೇನೆ’


05-01-2018 298

ಬೆಳಗಾವಿ: ಸಂವಿಧಾನ ಬದಲಿಸುವ ಮಾತನಾಡುವವರಿಗೆ ಆಸ್ಪತ್ರೆ ಸೇರಿಸಿ ಮಾನಸಿಕ ಚಿಕಿತ್ಸೆ ಕೊಡಿಸಬೇಕು ಎಂದು, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ. ಬೆಳಗಾವಿಯಲ್ಲಿಂದು ಮಾತನಾಡಿದ ಅವರು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ದ ಕಿಡಿಕಾರಿದ್ದಾರೆ. ಭಾರತದ ವ್ಯವಸ್ಥೆ ನಿಂತಿರುವುದೇ ಸಂವಿಧಾನದ ಆಶಯಗಳ ಮೇಲೆ. ಎಲ್ಲ ಸರ್ಕಾರಗಳು ಸಂವಿಧಾನದ ಮೇಲೆ ನಡೆಯುತ್ತದೆ. ಸಂವಿಧಾನ ಬದಲಿಸುವ ಹೇಳಿಕೆ ನೀಡುವುದು ಸರಿಯಲ್ಲ ಎಂದಿದ್ದಾರೆ.

ಅದಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ವಾಗ್ದಾಳಿ ನಡೆಸಿ, ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣದ ಹೆಸರಲ್ಲಿ ನರೇಂದ್ರ ಮೋದಿ‌ ಜನರನ್ನು ಮರುಳು ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡುತ್ತೀರಿ, ಆದರೆ ರೈತರ ಸಾಲ ಮನ್ನಾ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪ್ರತಿಯೊಬ್ಬನಿಗೂ ಜೀವಿಸುವ ಹಕ್ಕು ಸಂವಿಧಾನ ನೀಡಿದೆ. ರೈತರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೇಂದ್ರ ಸರ್ಕಾರ ರೈತರಿಗಿಂತ ಉದ್ಯಮಪತಿಗಳ ಪರವಾಗಿದೆ. ಅಧಿಕಾರಕ್ಕೆ ಬಂದು ಹೆಚ್ಚು ಕಡಿಮೆ 4 ವರ್ಷವಾದರೂ ಒಂದೇ ಮಾತು ರೈತರ ಪರವಾಗಿ ಮಾತನಾಡಿಲ್ಲ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಅವಕಾಶ ನೀಡಿ ಸುಮ್ಮನಿದ್ದೆ. ನಾನು ಇದುವರೆಗೆ ಹಲವು ಪತ್ರಗಳನ್ನು ಪ್ರಧಾನಿಗೆ ಬರೆದಿದ್ದೇನೆ. ಅವರಿಂದ ಯಾವುದೇ ಪತ್ರಕ್ಕೆ ಉತ್ತರ ಬಂದಿಲ್ಲ. ಹೀಗಾಗಿ ನಾನು ಮತ್ತೆ ಹೋರಾಟಕ್ಕೆ ಧುಮಕುತ್ತಿದ್ದೇನೆ, ಪ್ರಧಾನಿಗೆ ನಾನು ಬರೆದ ಪತ್ರಕ್ಕೆ ಉತ್ತರಿಸಲು ಸಮಯ ಇಲ್ಲ. ನಾನು ಸಾಮಾನ್ಯ ವ್ಯಕ್ತಿ ಹಾಗಾಗಿ ನನಗೆ ಬರೆದಿರಲ್ಲಿಕ್ಕಿಲ್ಲ ಅಂತಾ ಅನಿಸುತ್ತದೆ. ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಅಲ್ಲಿ ಲೋಕಾಯುಕ್ತ ಇರಲಿಲ್ಲ. ಗುಜರಾತ್ ನಲ್ಲಿ 11ವರ್ಷದಿಂದ ಲೋಕಾಯುಕ್ತ ಜಾರಿಗೆ ಬಂದಿಲ್ಲ. ಇಂತಹವರು ಇಂದು ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Anna Hazare Constitution ಲೋಕಾಯುಕ್ತ ಭ್ರಷ್ಟಾಚಾರ