ಅಚ್ಛೇದಿನವೂ ಇಲ್ಲ…ಸ್ವಚ್ಛ ಗಂಗೆಯೂ ಇಲ್ಲ


20-12-2017 601

ಪ್ರಧಾನಿ ನರೇಂದ್ರ ಮೋದಿಯವರು ಹೇಳುವುದು ಒಂದು ಮಾಡುವುದು ಇನ್ನೊಂದಾ? ಮೋದಿ ಮತ್ತು ಅವರ ಸರ್ಕಾರದ್ದು ಮಂತ್ರಕ್ಕಿಂತ ಉಗುಳೇ ಹೆಚ್ಚು ಅನ್ನುವ ರೀತಿಯಲ್ಲಿ, ಮಾತೇ ಹೆಚ್ಚು ಕೆಲಸ ಕಡಿಮೆ ಎನ್ನುವ ಸರ್ಕಾರವೇ? ಈ ಎಲ್ಲಾ ಪ್ರಶ್ನೆಗಳೂ ಕೂಡ ಜನಸಾಮಾನ್ಯರಲ್ಲಿ ಮೂಡಿದ್ದರೆ ಅವನ್ನು ತಪ್ಪು ಎಂದು ತಳ್ಳಿಹಾಕಿಬಿಡಲು ಸಾಧ್ಯವಿಲ್ಲ. ಏಕೆಂದರೆ, ಕಾಶಿ ಅಥವ ವಾರಣಾಸಿಯಿಂದ ಲೋಕಸಭೆಗೆ ಸ್ಪರ್ಧಿಸಿ ದೇಶದ ಪ್ರಧಾನಿಯಾಗಿ ಆಯ್ಕೆಯಾದ ನರೇಂದ್ರ ಮೋದಿ ಗಂಗೆಯನ್ನು ಸ್ವಚ್ಛಗೊಳಿಸಲು ಏನು ಮಾಡುತ್ತಿದ್ದಾರೆ ಅನ್ನುವುದು ಗೊತ್ತಾಗುತ್ತಿಲ್ಲ. ನಮಾಮಿ ಗಂಗೆ ಎಂದು ಹೆಸರಿಟ್ಟು ಒಂದು ವಿಡಿಯೋ ಬಿಡುಗಡೆ ಮಾಡಿ ಪ್ರಚಾರ ಪಡೆದುಕೊಂಡಿದ್ದನ್ನು ಬಿಟ್ಟರೆ, ನಿಜವಾಗಲೂ ಹೆಚ್ಚಿನದೇನನ್ನೂ ಮಾಡಿಲ್ಲ. ಈ ಮಾತನ್ನು ನಾವು ಹೇಳುತ್ತಿಲ್ಲ, ಸಿಎಜಿ(ನಿಯಂತ್ರಕ ಮತ್ತು ಮಹಾಲೆಕ್ಕ ಪರಿಶೋಧಕ) ವರದಿ ಹೇಳುತ್ತಿದೆ. ಕಳೆದ ಮೂರು ವರ್ಷಗಳಿಂದ ಗಂಗಾ ನದಿ ಸ್ವಚ್ಛಗೊಳಿಸಲು ಬಿಡುಗಡೆ ಮಾಡಿದ್ದ ಸುಮಾರು 2,500 ಕೋಟಿ ರೂಪಾಯಿ ಹಣ ಉಪಯೋಗವೇ ಆಗದೆ ಹಾಗೇ  ಕೊಳೆಯುತ್ತಾ ಬಿದ್ದಿದೆ. ಈ ಬಗ್ಗೆ ಸಂಸತ್ತಿನಲ್ಲಿ ವರದಿ ಮಂಡಿಸಲಾಗಿದೆ. ಗಂಗಾ ನದಿ ಸ್ವಚ್ಛಗೊಳಿಸಲು ಬಿಡುಗಡೆ ಮಾಡಿದ್ದ ಹಣ ಬಳಸಿಕೊಂಡು ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸಲು ಮೋದಿ ಸರ್ಕಾರ ವಿಫಲವಾಗಿರುವುದಕ್ಕೆ ಇದೇ ಸಾಕ್ಷಿ. ಗಂಗಾ ನದಿಯ ನೀರು ಕುಡಿಯುವುದಕ್ಕಿರಲಿ ಔಪಚಾರಿಕ ಪುಣ್ಯ ಸ್ನಾನ ಮಾಡುವುದಕ್ಕೂ ಯೋಗ್ಯವಾಗಿಲ್ಲ. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳಗಳಲ್ಲಿ ಹರಿಯುವ ಗಂಗಾ ನದಿಯಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯ ಮಟ್ಟ 6 ರಿಂದ 334 ಪಟ್ಟು ಹೆಚ್ಚಿಗೆ ಇರುವುದು ಕಂಡು ಬಂದಿದೆ ಎಂದು, ಸಿಎಜಿ ವರದಿ ತಿಳಿಸುತ್ತದೆ. ಇದರ ಜೊತೆಗೆ ಮೋದಿಯವರು ಸಂಸದರಾಗಿ ನಾಲ್ಕು ವರ್ಷಗಳಾಗುತ್ತಾ ಬಂದರೂ ಕೂಡ ವಾರಣಾಸಿಯ ಪರಿಸ್ಥಿತಿಯೂ ಬದಲಾಗಿಲ್ಲ. ಬನಾರಸ್ ಪಾನ್ ಜಗಿದು ಬೀದಿಯ ಮಧ್ಯಕ್ಕೇ ಪಿಚಕಾರಿ ರೀತಿಯಲ್ಲಿ ಉಗಿಯುವ ಜನರು, ಅದೇ ಕಿತ್ತು ಹೋದ ರಸ್ತೆಗಳು, ಅದೇ ಧೂಳು. ಅದೇ ಗಲೀಜು. ಕಾಶಿ ವಿಶ್ವನಾಥನ ದರ್ಶನಕ್ಕೆಂದು ವಾರಣಾಸಿಗೆ ಹೋಗುವ ದಕ್ಷಿಣ ಭಾರತದ ಯಾತ್ರಿಗಳಿಗಂತೂ ಜಿಗುಪ್ಸೆ ಹುಟ್ಟುತ್ತದೆ.

ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಇಚ್ಛಾಶಕ್ತಿ ತೋರಿಸಿದರೆ, ಪವಿತ್ರ ಕ್ಷೇತ್ರ ವಾರಣಾಸಿಯಲ್ಲೂ ದಕ್ಷಿಣದ ತಿರುಪತಿ ತಿರುಮಲದ ಮಟ್ಟದ ಸ್ವಚ್ಛತೆ ಮತ್ತು ಸುವ್ಯವಸ್ಥೆ ರೂಪಿಸಬಹುದು. ಆದರೆ, ಕೇವಲ ಬಾಯಿಮಾತಿನ ಸೇವೆಗಳಿಂದ ಯಾವುದೇ ಲಾಭ ಆಗುವುದಿಲ್ಲ. ಒಟ್ಟಿನಲ್ಲಿ, ದೇಶದ ಜನರು ಕಾಯುತ್ತಲೇ ಇದ್ದಾರೆ, ಅವರಿಗೆ ಅಚ್ಛೇ ದಿನಗಳೂ ಬರಲಿಲ್ಲ, ಸ್ವಚ್ಛ ಗಂಗೆಯೂ ಸಿಕ್ಕಿಲ್ಲ.


ಒಂದು ಕಮೆಂಟನ್ನು ಬಿಡಿ