‘ಈಶ್ವರಪ್ಪ ಪಾಠದಂತೆ ಅವರು ನಡೆದುಕೊಳ್ಳುತ್ತಿದ್ದಾರೆ’


15-12-2017 364

ಬೆಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ತಮ್ಮ ಫೇಸ್‍ ಬುಕ್ ಖಾತೆಯಲ್ಲಿ ಹಾಕಿಕೊಂಡಿರುವ ಸ್ಟೇಟಸ್ ಕೇವಲ ಅವರ ಸ್ಟೇಟಸ್ ಮಾತ್ರವಲ್ಲ, ಅದು ಬಿಜೆಪಿಯ ಸ್ಟೇಟಸ್ ಆಗಿದೆ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ತಾವು ಬಹಳ ಸುಸಂಸ್ಕೃತರು ಎಂದು ಹೇಳಿಕೊಳ್ಳುತ್ತಾರೆ. ಅವರ ಭಾಷೆಯೇ ಅವರ ಸಂಸ್ಕೃತಿ ಎಂತಹದ್ದು ಎಂದು ತೋರಿಸುತ್ತದೆ. ಕೆ.ಎಸ್.ಈಶ್ವರಪ್ಪ ಅವರ ಮಾಸ್ಟರ್. ಆ ಮಾಸ್ಟರ್ ಪಾಠ ಮಾಡಿದ್ದಾರೆ, ನಾವೆಲ್ಲ ಅದನ್ನ ನೋಡಿದ್ದೇವೆ. ಈಶ್ವರಪ್ಪ ಪಾಠದಂತೆ ಅವರೆಲ್ಲಾ ನಡೆದುಕೊಳ್ಳುತ್ತಿದ್ದಾರೆ. ಸಂಸದ ಪ್ರತಾಪ್ ಸಿಂಹ ಕೆಲ ದಿನಗಳ ಹಿಂದೆ ಸತ್ಯವನ್ನ ತಾವೇ ಒಪ್ಪಿಕೊಂಡಿದ್ದಾರೆ. ಅವರ ಪಕ್ಷದ ಸಂಸ್ಕೃತಿಯೇ ಅಂತದ್ದು ಎಂದು ಅನಂತ್ ಕುಮಾರ್ ಹೆಗಡೆ ಜೊತೆಗೆ ಪ್ರತಾಪ್ ಸಿಂಹ ಹಾಗೂ ಕೆ.ಎಸ್.ಈಶ್ವರಪ್ಪ ವಿರುದ್ಧವೂ ಅವರು ಕಿಡಿಕಾರಿದರು.

ಅಧಿಕೃತ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸುಳ್ಳನ್ನು ಪದೇ ಪದೇ ಹೇಳಿ ಎಂದು ತಮ್ಮ ಕಾರ್ಯಕರ್ತರಿಗೆ ಪಾಠ ಮಾಡಿದ್ದಾರೆ. ಇದೀಗ ಜೈಲ್ ಭರೋ ಅನ್ನೋ ಹೊಸ ನಾಟಕ ಶುರು ಮಾಡಲು ಹೊರಟಿದ್ದಾರೆ. ಇದು ಬಿಜೆಪಿ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಅಂದರೆ ಸುಳ್ಳಿನ ಕಂತೆ. ನಾಲ್ಕೂವರೆ ವರ್ಷ ಸುಮ್ಮನಿದ್ದ ಬಿಜೆಪಿ ಮುಖಂಡರು ಇದೀಗ ಹೋರಾಟ ಶುರು ಮಾಡಿದ್ದು ಯಾಕೆ? ಅಮಿತ್ ಷಾ ಆದೇಶ ಪ್ರಕಾರ ಮಾಡುತ್ತಿರುವುದಾಗಿ ಸಂಸದ ಪ್ರತಾಪ್ ಸಿಂಹ ಖುದ್ದು ಹೇಳಿದ್ದಾರೆ. ಇದರಿಂದಲೇ ರಾಜ್ಯದ ಜನ ಬಿಜೆಪಿ ನಾಯಕರು ಎಂತವರು ಎಂದು ಅರ್ಥ ಮಾಡಿಕೊಂಡಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಪಕ್ಷ ಮತ್ತು ಸರ್ಕಾರ ಸರಿಯಾದ ಹಾದಿಯಲ್ಲಿ ಸಾಗುತ್ತಿವೆ. ಪಕ್ಷದ ಹೈಕಮಾಂಡ್ ನಿರ್ದೇಶನದ ಮೇರೆಗೆ ಎರಡು ಯಾತ್ರೆ ಮಾಡುತ್ತಿದ್ದೇವೆ. ಸರ್ಕಾರದ ಸಾಧನೆ ವಿವರಿಸಲು ಒಂದು ಯಾತ್ರೆ, ಪಕ್ಷ ಸಂಘಟನೆಗೆ ಮತ್ತೊಂದು ಯಾತ್ರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಚಿವ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

D.K.Shivakumar Anant Kumar Hegde ಸ್ಟೇಟಸ್ ಫೇಸ್‍ ಬುಕ್