ಜನರ ಪ್ರಾಣದೊಂದಿಗೆ ಚೆಲ್ಲಾಟ: 4 ಮಂದಿ ಬಂಧನ


13-12-2017 452

ಬೆಂಗಳೂರು: ನಂದಿನಿ ತುಪ್ಪವನ್ನು ಕಲಬೆರಕೆ ಮಾಡಿ ಮಾರಾಟ ಮಾಡುತ್ತಾ ಸಾರ್ವಜನಿಕರ ಜೀವನದ ಜೊತೆ ಚೆಲ್ಲಾಟ ವಾಡುತ್ತಿದ್ದ ಈಗಲ್ ಎಂಟರ್ ಪ್ರೈಸಸ್ ಕಂಪನಿಯ ಮ್ಯಾನೇಜರ್ ಸೇರಿ ನಾಲ್ವರನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಮಾಗಡಿ ರಸ್ತೆಯ ಕೆಪಿ ಅಗ್ರಹಾರದ ಅಯ್ಯಪ್ಪಸ್ವಾಮಿ ಅಲಿಯಾಸ್ ಮಣಿ (30), ಈಗಲ್ ಕಂಪನಿಯ ಮ್ಯಾನೇಜರ್ ಕೆಂಗೇರಿಯ ಚಿಕ್ಕೇಗೌಡನ ಪಾಳ್ಯದ ಮಾರುತಿ (27) ಕುಮಾರಪಾರ್ಕ್‍ನ ನಂದಿನಿ ಪಾರ್ಲರ್‍ ನ ಶಿವಕುಮಾರ್ (44), ಧರ್ಮಪುರಿಯ ಭಾರತಿಪುರಂನ ಸುಕುಮಾರನ್ (67) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಕಲಬೆರಕೆ ತುಪ್ಪದ ಪ್ಯಾಕೆಟ್‍ಗಳು, ಪ್ಯಾಕಿಂಗ್ ಮಿಷನ್, ನಂದಿನಿ ತುಪ್ಪದ ಚಿಹ್ನೆ ಹೊಂದಿದ್ದ ಕವರ್‍ ಗಳು, ಕಾಟನ್ ಬಾಕ್ಸ್‍ ಗಳು, ಪ್ರಿಂಟಿಂಗ್ ಸಿಲಿಂಡರ್ ಹಾಗೂ ಅಚ್ಚುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳಾದ ಶಿವಕುಮಾರ್ ಹಾಗೂ ಮಂಜುನಾಥ್ ಕಲಬೆರಕೆ ತುಪ್ಪದ ಪ್ಯಾಕೆಟ್‍ಗಳನ್ನು ಸುಲಭವಾಗಿ ಗ್ರಾಹಕರಿಗೆ ತಲುಪಿಸಿ ಸಾರ್ವಜನಿಕರು ಹಾಗೂ ಮಕ್ಕಳ ಆರೋಗ್ಯದ ಜತೆ ಚೆಲ್ಲಾಟವಾಡಿ, ಸುಲಭವಾಗಿ ಹಣ ಸಂಪಾದನೆ ಮಾಡಿರುವುದು ಪತ್ತೆಯಾಗಿದೆ. ಜಾಲದ ಪ್ರಮುಖ ಈರೋಪಿ ಮಣಿ ತಮಿಳುನಾಡು ಮೂಲದವನಾಗಿದ್ದು, 15 ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದನು, ಕೆಪಿ ಅಗ್ರಹಾರದಲ್ಲಿ ಬಾಡಿಗೆ ಮನೆ ಪಡೆದು ಅನಿಲ್ ಶ್ಯಾವಿಗೆ ಕಂಪನಿಯ ಡೀಲರ್ ಶಿಪ್ ಲೈಸೆನ್ಸ್ ಪಡೆದು ಮಾರಾಟ ಮಾಡುತ್ತಿದ್ದನಲ್ಲದೆ, ಪೂಜೆಗೆ ಬಳಸುವ ತುಪ್ಪವನ್ನು ಮನೆಯಲ್ಲೇ ತಯಾರಿಸಿ, ಸಗಟು ಮಾರಾಟ ಮಾಡುತ್ತಿದ್ದ. ಈ ವ್ಯಾಪಾರದಲ್ಲಿ ಬರುತ್ತಿದ್ದ ಕಡಿಮೆ ಲಾಭದಲ್ಲಿ ಸಾಲ ತೀರಿಸಲು ಸಾಧ್ಯವಾಗದೆ ಸುಲಭವಾಗಿ ಹಣ ಸಂಪಾದನೆ ಮಾಡುವ ಯೋಜನೆ ರೂಪಿಸಿ, ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದ್ದ. ನಂದಿನಿ ತುಪ್ಪದ ಪ್ಯಾಕೆಟ್‍ನ್ನು ನಕಲು ಮಾಡಲು ಚಿಂತನೆ ನಡೆಸಿದ್ದ.

ಕರ್ನಾಟಕದಲ್ಲಿ ಈ ಕೃತ್ಯವೆಸಗಿದರೆ, ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳುತ್ತೇನೆಂಬ ಕಾರಣಕ್ಕೆ ತಮಿಳುನಾಡಿನಲ್ಲಿ ಈ ಕೃತ್ಯಕ್ಕೆ ಮುಂದಾಗಿದ್ದ. ಮೊದಲಿಗೆ ಎಣ್ಣೆ ಪ್ಯಾಕೆಟ್ ತಯಾರಿಸುವುದಾಗಿ ಈರೋಡ್‍ನಲ್ಲಿರುವ ಗೋಡೌನ್‍ವೊಂದನ್ನು ಬಾಡಿಗೆಗೆ ಪಡೆದು, ಕೃಷ್ಣಗಿರಿಗೆ ತೆರಳಿ ಅಂಗಡಿಗಳ ಮಾಹಿತಿ ಪಡೆದು ಚೆನ್ನೈನ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿ ಅವರಿಗೆ ಸ್ಯಾಂಪಲ್ ಪೀಸ್‍ಗಳನ್ನು ನೀಡಿ, ನಂದಿನಿ ತುಪ್ಪದ ಮೇಲೆ ಪ್ರಿಂಟಿಂಗ್ ಮಾಡಲು ಬಳಸುವ ಪ್ರಿಂಟಿಂಗ್ ಸಿಲಿಂಡರ್‍ ಗಳನ್ನು ತಯಾರು ಮಾಡಿ ಅದನ್ನು ತೆಗೆದುಕೊಂಡು, ಧರ್ಮಪುರಿಗೆ ಬಂದು ಅಲ್ಲಿಂದ ಪ್ರಿಂಟಿಂಗ್ ಗೋಡೌನ್‍ವೊಂದರಲ್ಲಿ ಮ್ಯಾನೇಜರ್ ಆಗಿದ್ದ ಮತ್ತೊಬ್ಬ ಆರೋಪಿ ಸುಕುಮಾರ್‍ನನ್ನು ಸಂಪರ್ಕಿಸಿ, 200, 500 ಎಂಎಲ್ ಹಾಗೂ 1 ಲೀಟರ್ ಅಳತೆಯ ತುಪ್ಪದ ಕವರ್‍ ಗಳನ್ನು ಸಿದ್ಧಪಡಿಸಿದ್ದನು.

ತುಪ್ಪದ ಪ್ಯಾಕಿಂಗ್ ಮಾಡುವ ಮಿಷನ್‍ನನ್ನು ಬ್ರೋಕರ್‍ವೊಬ್ಬರ ಮೂಲಕ ಹೈದ್ರಾಬಾದ್‍ನಲ್ಲಿ ಖರೀದಿಸಿ, ಈರೋಡ್‍ನ ಗೋಡೌನ್‍ನಲ್ಲಿ ತಂದಿಟ್ಟುಕೊಂಡು ನಂದಿನಿ ಚಿಹ್ನೆ ಇರುವ ಕಾಟನ್ ಬಾಕ್ಸ್ ಗಳನ್ನು ಕೃಷ್ಣಗಿರಿಯಲ್ಲಿ, ಅದನ್ನು ಅಂಟಿಸುವ ಟೇಪ್‍ನ್ನು ಪಾಂಡಿಚೆರಿಯಲ್ಲಿ ಪ್ರಿಂಟಿಂಗ್ ಮಾಡಿಸಿಕೊಂಡು ಬಂದಿದ್ದನು. ಕಾಯಿಸಿದ ಕಲಬೆರಕೆ ತುಪ್ಪವನ್ನು ಬೆಂಗಳೂರಿನಿಂದ ತೆಗೆದುಕೊಂಡು ಹೋಗಲು ಟೆಂಪೋ ಟ್ರಾವಲರ್ ಖರೀದಿಸಿ, ಅದರ ಹಿಂಬದಿಯ ಸೀಟುಗಳನ್ನು ಕಳಚಿಟ್ಟು, ಕಲಬೆರಕೆ ತುಪ್ಪವನ್ನು ಈರೋಡ್‍ಗೆ ಸಾಗಿಸಿ, ಅಸಲಿ ತುಪ್ಪದಂತೆ ಸಿದ್ಧಪಡಿಸಿ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದೆ.

ಆರೋಪಿಗಳಾದ ಮಾರುತಿ, ಶಿವಕುಮಾರ್ ಬಂಧನದ ನಂತರ ಪೊಲೀಸರು ತನ್ನನ್ನು ಬಂಧಿಸುವ ಸಾಧ್ಯತೆ ಇದೆ ಎಂಬುದನ್ನು ಅರಿತ ಆರೋಪಿ ಮಣಿ, ತನ್ನ ಬಳಿ ಇದ್ದ ತುಪ್ಪವನ್ನು ರಾಜಕಾಲುವೆಗೆ ಸುರಿದು ಸಾಕ್ಷ್ಯಾಧಾರಗಳನ್ನು ನಾಶಪಡಿಸಿ, ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ. ನಕಲಿ ತುಪ್ಪವನ್ನು ಹಳೆಯ ಡಾಲ್ಡಾ, ಹಳೆಯ ಎಣ್ಣೆ ಇನ್ನಿತರ ವಸ್ತುಗಳಿಂದ ತಯಾರಿಸುತ್ತಿರುವುದು ಕಂಡು ಬಂದಿದೆ. ಕೆಎಂಎಫ್‍ನ ಮಾರುಕಟ್ಟೆ ವಿಭಾಗದ ನಿರ್ದೇಶಕ ಕುಲಕರ್ಣಿ ಅವರು ನೀಡಿದ ಕಲಬೆರಕೆ ತುಪ್ಪದ ದೂರು ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಆಡುಗೋಡಿ ಪೊಲೀಸ್ ಇನ್ಸ್ ಪೆಕ್ಟರ್ ಚೆಲುವೇಗೌಡ, ಮತ್ತವರ ಸಿಬ್ಬಂದಿ ಜಾಲವನ್ನು ಪತ್ತೆಹಚ್ಚಿದೆ.


ಒಂದು ಕಮೆಂಟನ್ನು ಬಿಡಿ