2 ಕಡೆ ಮನೆಗಳ್ಳತನ: ಚಿನ್ನಾಭರಣ ಲೂಟಿ


11-12-2017 234

ಬೆಂಗಳೂರು: ಹೆಗ್ಗಡೆನಗರದ ಬಾಲಾಜಿ ಕೃಪ ಲೇಔಟ್‍ನಲ್ಲಿ ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮದುವೆಗೆ ಹೋಗಿದ್ದ, ಹೂವಿನ ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು 10 ಲಕ್ಷ 60 ಸಾವಿರ ನಗದು, 130 ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಹೂವಿನ ವ್ಯಾಪಾರಿ ನಜೀಮ್ ಅಹಮದ್ ಅವರು ಬಾಲಾಜಿ ಕೃಪ ಲೇಔಟ್‍ನ ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತ ಹೋಗಿದ್ದರು. ಮದುವೆ ಮುಗಿಸಿಕೊಂಡು ಮನೆಗೆ ಬಂದು ನೋಡಿದಾಗ ಮನೆಯ ಬೀಗ ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ 10 ಲಕ್ಷ 60 ಸಾವಿರ ನಗದು, 130 ಗ್ರಾಂ ಚಿನ್ನಾಭರಣ, ಬೆಳ್ಳಿ ಆಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಕೂಡಲೇ ನಜೀಮ್ ಅಹಮದ್ ದೂರು ನೀಡಿದ್ದು ಪ್ರಕರಣ ದಾಖಲಿಸಿರುವ ಸಂಪಿಗೆ ಹಳ್ಳಿ ಪೊಲೀಸರು, ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಇನ್ನೊಂದೆಡೆ ನಗರದದಲ್ಲಿ, ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದ ಖಾಸಗಿ ಕಂಪನಿಯ ಸಾಫ್ಟ್ ವೇರ್ ಎಂಜಿನಿಯರ್ ಜಗದೀಶ್ ಕುಮಾರ್ ಅವರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು 400 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ, ಒಂದು ಲ್ಯಾಪ್‍ ಟಾಪ್ ದೋಚಿ ಪರಾರಿಯಾಗಿರುವ ಘಟನೆ ವೈಟ್ ಫೀಲ್ಡ್ ನ ವಿನಾಯಕ ನಗರದಲ್ಲಿ ನಡೆದಿದೆ.

ಜಗದೀಶ್ ಕುಮಾರ್ ಅವರು, ಎರಡು ದಿನಗಳ ಹಿಂದೆ ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿ ನಿನ್ನೆ ರಾತ್ರಿ ವಾಪಸ್ ಆಗಿ ಬಂದು ನೋಡಿದಾಗ ಮನೆ ಬಾಗಿಲು ಮುರಿದಿರುವ ದುಷ್ಕರ್ಮಿಗಳು ಕಳ್ಳತನವೆಸಗಿರುವುದು ಕಂಡುಬಂದಿದೆ. ಕೂಡಲೇ ವೈಟ್ ಫೀಲ್ಡ್ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ