ಹೆಂಡತಿಗೆ ಜಾತಿ,ಧರ್ಮ ಇರಲ್ವಾ..?


08-12-2017 548

ಜಾತ್ಯತೀತ ಭಾರತದಲ್ಲಿ ಇನ್ನೂ ಜಾತಿ, ಮತ ಮತ್ತು ಧರ್ಮಗಳ ನಡುವಿನ ಗೋಡೆಗಳು ಒಡೆದಿಲ್ಲ…ಹೀಗಿದ್ದರೂ ಅಲ್ಲಲ್ಲಿ ಆಗಾಗ ಅಂತರ್ ಜಾತಿ ಮತ್ತು ಅಂತರ್‌ ಧರ್ಮೀಯ ವಿವಾಹಗಳು ನಡೆಯುತ್ತಿರುತ್ತವೆ. ಆ ರೀತಿಯಲ್ಲಿ, ಅಂತರ್ ಧರ್ಮೀಯ ಮದುವೆಗಳ ನಂತರ ಪತ್ನಿಯಾದವಳನ್ನು ಪತಿಯ ಧರ್ಮಕ್ಕೆ ಸೇರಿದವಳೆಂದು ಪರಿಗಣಿಸಬೇಕೋ ಅಥವ ಆಕೆಯ ಮೂಲ ಧರ್ಮವನ್ನೇ ಲೆಕ್ಕಕ್ಕೆ ತೆಗೆದುಕೊಳ್ಳಬೇಕೋ ಅನ್ನುವ ವಿಚಾರದ ಬಗ್ಗೆ ಸ್ಪಷ್ಟತೆ ಇರಲಿಲ್ಲ, ಇದೀಗ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ತೀರ್ಪು ನೀಡಿರುವ ಸುಪ್ರೀಂಕೋರ್ಟು ‘ಅಂತರ್ ಧರ್ಮೀಯ ವಿವಾಹದ ಬಳಿಕ ಮಹಿಳೆಯ ಮೂಲಧರ್ಮ ಪತಿಯ ಧರ್ಮದ ಜೊತೆಗೆ ವಿಲೀನವಾಗಿಬಿಡುತ್ತದೆಂಬ ಪರಿಕಲ್ಪನೆಯನ್ನು ಕೋರ್ಟು ಮಾನ್ಯ ಮಾಡುವುದಿಲ್ಲ’ ಎಂದು ಹೇಳಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಹಿಂದೂ ವ್ಯಕ್ತಿಯನ್ನು ಮದುವೆಯಾದ ಪಾರ್ಸಿ ಮಹಿಳೆ, ತನ್ನ ಧಾರ್ಮಿಕ ಅಸ್ಮಿತೆ ಅಥವ ಅನನ್ಯತೆಯನ್ನು ಕಳೆದುಕೊಂಡು ಬಿಡುತ್ತಾಳೆಯೇ ಎಂಬ ಪ್ರಶ್ನೆ ಬಗ್ಗೆ ಕೋರ್ಟ್ ಅವಲೋಕನ ನಡೆಸಿತ್ತು. ಹಿಂದೂ ವ್ಯಕ್ತಿಯನ್ನು ವಿವಾಹವಾದ ಗೂಲ್‌ರುಖ್ ಗುಪ್ತ ಎಂಬ ಪಾರ್ಸಿ ಮಹಿಳೆ, ತನ್ನ ತಂದೆತಾಯಿಗಳ ಅಂತ್ಯ ಸಂಸ್ಕಾರ ನೆರವೇರಿಸಲು ಟವರ್ ಆಫ್ ಸೈಲೆನ್ಸ್ ಎಂಬ ಪಾರ್ಸಿ ಅಂತ್ಯ ಸಂಸ್ಕಾರ ತಾಣಕ್ಕೆ ಭೇಟಿ ನೀಡಬಹುದೇ ಎಂಬ ಬಗ್ಗೆ ಈ ಹಿಂದೆ ತೀರ್ಪು ನೀಡಿದ್ದ ಗುಜರಾತ್ ಹೈ ಕೋರ್ಟ್, ‘ಹಿಂದೂ ವ್ಯಕ್ತಿಯನ್ನು ವಿವಾಹವಾದ ಮಹಿಳೆ, ತನ್ನ ಮೂಲಧರ್ಮಕ್ಕೆ ಸಂಬಂಧಿಸಿದ ಧಾರ್ಮಿಕ ಹಕ್ಕುಗಳನ್ನು ಕಳೆದುಕೊಳ್ಳುತ್ತಾಳೆ’ ಎಂದು ಹೇಳಿತ್ತು.  ಈ ತೀರ್ಪನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ‘ವಿವಾಹಿತ ಮಹಿಳೆ ತನ್ನ ಮೂಲಧರ್ಮದ ಅಸ್ಮಿತೆ ಅಥವ ಗುರುತನ್ನು ಕಳೆದುಕೊಳ್ಳುತ್ತಾಳೆ ಎಂದು ಯಾವುದೇ ಕಾನೂನು ಹೇಳುವುದಿಲ್ಲ. ಇದಕ್ಕೂ ಮಿಗಿಲಾಗಿ, ವಿಶೇಷ ವಿವಾಹಗಳ ಕಾಯ್ದೆ ಅಡಿಯಲ್ಲಿ ಎರಡು ವಿಭಿನ್ನ ಧರ್ಮಕ್ಕೆ ಸೇರಿದ ವ್ಯಕ್ತಿಗಳು ಮದುವೆಯಾದ ನಂತರವೂ, ತಮ್ಮ ಮೂಲ ಧರ್ಮಗಳನ್ನು ಉಳಿಸಿಕೊಳ್ಳಲು ಅವಕಾಶ ನೀಡುತ್ತದೆ’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.


ಒಂದು ಕಮೆಂಟನ್ನು ಬಿಡಿ