ಪಂಚಲೋಹ ವಿಗ್ರಹ ಕದ್ದಿದ್ದವನ ಬಂಧನ

ಬೆಂಗಳೂರು: ನಂದಗುಡಿಯ ಶನಿಮಹಾತ್ಮ ದೇವಸ್ಥಾನದ ಬೀಗ ಮುರಿದು, ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯ ಅರಸರು ಕೊಡುಗೆಯಾಗಿ ನೀಡಿದ್ದ 4 ಪಂಚಲೋಹ ವಿಗ್ರಹಗಳೂ ಸೇರಿ 6 ವಿಗ್ರಹಗಳನ್ನು ಕಳವು ಮಾಡಿದ್ದ ಕುಖ್ಯಾತ ಕಳ್ಳ ಕೆ.ಆರ್.ಪುರಂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಕೋಲಾರ ಜಿಲ್ಲೆ ರಾಮಸಂದ್ರದ ಅಂಬರೀಷ್ (36) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 7 ಲಕ್ಷ ಮೌಲ್ಯದ 6 ಪಂಚಲೋಹದ ವಿಗ್ರಹಗಳು, 200 ಗ್ರಾಂ ಚಿನ್ನಾಭರಣಗಳು, 2 ದ್ವಿಚಕ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಆರೋಪಿಯು ತಲೆಮರೆಸಿಕೊಂಡಿರುವ ಚಿತ್ತೂರಿನ ರೆಡ್ಡಿ ಆಲಿಯಾಸ್ ಸುಬ್ರಮಣಿ ಎಂಬಾತನ ಜೊತೆ ಸೇರಿ ನಂದಗುಡಿಯ ಶನಿಮಹಾತ್ಮ ದೇವಸ್ಥಾನದ ಬೀಗ ಮುರಿದು ಪಂಚಲೋಹದ ವಿಗ್ರಹಗಳನ್ನು ಕಳ್ಳತನ ಮಾಡಿದ್ದರು. ಕಳವು ಮಾಡಿದ್ದ ವಿಗ್ರಹಗಳನ್ನು ಕೆ.ಆರ್.ಪುರಂನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ, ಕಾರ್ಯಾಚರಣೆ ನಡೆಸಿದ ಕೆ.ಆರ್.ಪುರಂ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ ಎಂದು, ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ತಿಳಿಸಿದರು.
ಆರೋಪಿಯು ಹೆಣ್ಣೂರಿನಲ್ಲಿ ಪಲ್ಸರ್ ಬೈಕ್, ಕೊತ್ತನೂರಿನಲ್ಲಿ ಸ್ಕೂಟಿ ಪೆಪ್, ಸ್ಕೂಟರನ್ನು ಕಳವು ಮಾಡಿ ಅದರಲ್ಲಿ ನಗರದ ವಿವಿಧೆಡೆ ಸುತ್ತಾಡುತ್ತ ಒಂಟಿ ಮಹಿಳೆಯರ ಚಿನ್ನದ ಸರಗಳನ್ನು ಕಳವು ಮಾಡುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದೆ.
ಕೆ.ಆರ್.ಪುರಂನ ಕೋಟೆ ಆಂಜನೇಯ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯೊಬ್ಬರ ಬ್ಯಾಗ್ನಲ್ಲಿದ್ದ 30 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿದ್ದು, ಅವುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಜೊತೆ ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ರೆಡ್ಡಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ತಿಳಿಸಿದರು.
ಒಂದು ಕಮೆಂಟನ್ನು ಬಿಡಿ