ದಟ್ಟ ಮಂಜು: ಬೈಕ್ ಸವಾರ ಸಾವು


28-11-2017 437

ಬೆಂಗಳೂರು: ದೇವನಹಳ್ಳಿಯ ಕಾರಹಳ್ಳಿ ಬಳಿ ಇಂದು ಮುಂಜಾನೆ ದಟ್ಟ ಮಂಜು ಕವಿದ ಹಿನ್ನೆಲೆಯಲ್ಲಿ ರಸ್ತೆ ಕಾಣದೇ ಒಂದೇ ಬೈಕ್‍ನಲ್ಲಿ ಹೋಗುತ್ತಿದ್ದ ಮೂವರು ಎದುರಿನಿಂದ ಬಂದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದು ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ.

ಮೃತಪಟ್ಟ ಸವಾರನನ್ನು ಆಂಧ್ರ ಮೂಲದ ಎಲೆಕ್ಟ್ರಾನಿಕ್ ಸಿಟಿಯ ರಾಕಿ(23)ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ರಾಕೇಶ್ ಹಾಗೂ ಚಿರಂಜೀವಿಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈ ಮೂವರು ಸ್ನೇಹಿತರು ಒಂದೇ ಬೈಕ್‍ನಲ್ಲಿ  ಬೆಳಗ್ಗೆ 6.20ರ ವೇಳೆ ನಂದಿಬೆಟ್ಟಕ್ಕೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ  ಕಾರಹಳ್ಳಿ ಬಳಿ ದಟ್ಟ ಮಂಜು ಕವಿದ ಹಿನ್ನೆಲೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಕಾಣಿಸದೇ ವೇಗದಲ್ಲಿ ಡಿಕ್ಕಿ ಹೊಡೆದಿದ್ದಾರೆ.

ಮುಖಾಮುಖಿಯಾಗಿ  ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಚಲಾಯಿಸುತ್ತಿದ್ದ ರಾಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡಿರುವ ಇಬ್ಬರನ್ನು ದೇವನಹಳ್ಳಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ವಿಶ್ವನಾಥಪುರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ