ನಿಮ್ಹಾನ್ಸ್ ನಲ್ಲಿ ನರ್ಸ್ ಗಳ ದಿಢೀರ್ ಪ್ರತಿಭಟನೆ


21-11-2017 1119

ಬೆಂಗಳೂರು: ನಿಮ್ಹಾನ್ಸ್ ನಲ್ಲಿ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ನಿಮ್ಹಾನ್ಸ್ ನರ್ಸ್‍ಗಳು ಸಂಸ್ಥೆಯ ಆವರಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಶುಶ್ರೂಷಕ ರಂಜಿತ್ ಮಾತನಾಡಿ, ನಿಮ್ಹಾನ್ಸ್ ಸಂಸ್ಥೆ ದೇಶದಲ್ಲೇ ಅತ್ಯುತ್ತಮ ಸಂಸ್ಥೆಯಾಗಿದ್ದು, ವರ್ಷಕ್ಕೆ ಲಕ್ಷಾಂತರ ಬಡ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ. ಆದರೆ ಇಲ್ಲಿ ಮಂಜೂರಾಗಿರುವ ಹುದ್ದೆಗಳ ಪೈಕಿ ಅರ್ಧದಷ್ಟು ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಅರ್ಧದಷ್ಟು ಹುದ್ದೆಗಳು ಖಾಲಿ ಇವೆ. ಕೂಡಲೇ ಅವುಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿದರು.

ಮಂಜೂರಾಗಿರುವ ಹುದ್ದೆಗಳ ಪೈಕಿ ಅರ್ಧದಷ್ಟು ಹುದ್ದೆಗಳು ಖಾಲಿಯಿರುವುದರಿಂದ  ಈಗಿರುವ ಸಿಬ್ಬಂದಿಗೆ ಹೆಚ್ಚಿನ ಹೊರೆಯಾಗುತ್ತಿದೆ ಎಂದು ಆರೋಪಿಸಿದರು. ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಪ್ರತಿವರ್ಷ ಸಂಸ್ಥೆಯನ್ನು ವಿಸ್ತರಿಸಲಾಗುತ್ತಿದೆ. ಹೊಸ ಕಟ್ಟಡ, ಹೊಸ ವಿಭಾಗಗಳನ್ನು ತೆರೆಯಲಾಗುತ್ತಿದೆ. ಆದರೆ ನರ್ಸ್‍ಗಳು ಮತ್ತು ಇತರ ಸಿಬ್ಬಂದಿಯ ನೇಮಕಾತಿ ಮಾಡುತ್ತಿಲ್ಲ. ಇರುವ ಸಿಬ್ಬಂದಿಗೆ ಹೆಚ್ಚುವರಿ ಕೆಲಸ ವಹಿಸಿಕೊಡಲಾಗುತ್ತಿದೆ ಎಂದು ದೂರಿದರು.

ಒಟ್ಟು 1278 ಹುದ್ದೆಗಳು ನಿಮ್ಹಾನ್ಸ್ಗೆ ಮಂಜೂರಾಗಿದೆ. ಅದರಲ್ಲಿ ಕೇವಲ 434 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಈ ಕೂಡಲೇ ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಇಲ್ಲದಿದ್ದರೆ ಮುಷ್ಕರ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ನೂರಾರು ಶುಶ್ರೂಷಕಿಯರು, ಇತರ ಸಿಬ್ಬಂದಿ ಕೂಡ ಭಾಗಿಯಾಗಿದ್ದರು. ಬಳಿಕ ನಿಮ್ಹಾನ್ಸ್ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

NIMHANS Recruitment ನಿಮ್ಹಾನ್ಸ್ ನರ್ಸ್‍ಗಳು