ಕಂಬಳ: ‘ಸುಗ್ರೀವಾಜ್ಞೆ ತೃಪ್ತಿದಾಯಕವಾಗಿಲ್ಲ’


17-11-2017 977

ಬೆಂಗಳೂರು: ಕಂಬಳಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯ ಸಿಂಧುತ್ವವನ್ನೇ ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ. ಕಂಬಳ‌ ನಿಷೇಧಿಸುವಂತೆ ಪ್ರಾಣಿ ದಯಾ ಸಂಸ್ಥೆ ಪೇಟಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಾದೀಶರಾದ ದೀಪಕ್ ಮಿಶ್ರಾ ನೇತೃತ್ವದ ತ್ರಿ-ಸದಸ್ಯ ಪೀಠ, ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆ ತೃಪ್ತಿದಾಯಕವಾಗಿಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಕಂಬಳಕ್ಕಾಗಿ ಸಿದ್ಧಪಡಿಸಿದ ವಿಧೇಯಕವನ್ನು ರಾಜ್ಯ ಸರ್ಕಾರ ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಲಾಗಿತ್ತು, ರಾಷ್ಟ್ರಪತಿಗಳು ಈ ವಿಧೆಯಕ್ಕೆ ಒಪ್ಪಿಗೆ ನೀಡದೆ ಮರು ಪರಿಶೀಲನೆ ಮಾಡುವಂತೆ, ಒಂದಷ್ಟು ನಿರ್ದೇಶನಗಳನ್ನು ನೀಡಿ ವಾಪಸ್ಸು ಕಳುಹಿಸಿದ್ದರು. ಬಳಿಕ ವಿಧೇಯಕವನ್ನು ವಾಪಸ್ಸು ಪಡೆದ ಸರ್ಕಾರ ರಾಷ್ಟ್ರಪತಿ ನಿರ್ದೇಶನಗಳನ್ನು ಬಳಸಿಕೊಂಡು ಸುಗ್ರೀವಾಜ್ಞೆ ಹೊರಡಿಸಿತ್ತು. ಹೀಗೆ ಹೊರಡಿಸಲಾಗಿರುವ ಸುಗ್ರೀವಾಜ್ಞೆಯ ಸಿಂಧುತ್ವದ ಬಗ್ಗೆ ಇಂದು ಸುಪ್ರೀಂ ಕೋರ್ಟ್ ಶಂಕೆ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. "ಒಪ್ಪಿಗೆ ಇಲ್ಲದ ಅಂಶಗಳುಳ್ಳ ವಿಧೇಯಕದ ಸುಗ್ರೀವಾಜ್ಞೆಗೆ ಸಿಂಧುತ್ವ ಇದೆಯೇ" ಎಂದು ನ್ಯಾ. ಚಂದ್ರಚೂಡ್ ರಾಜ್ಯ ಸರ್ಕಾರದ ವಕೀಲರನ್ನು ಪ್ರಶ್ನಿಸಿದ್ದಾರೆ. ಕಂಬಳ ವಿಧೇಯಕಕ್ಕೆ ರಾಷ್ಟ್ರಪತಿ ಒಪ್ಪಿಗೆ ಕೊಟ್ಟಿರಲಿಲ್ಲ ಸುಗ್ರೀವಾಜ್ಞೆ ಹೊರಡಿಸಲು ಮಾತ್ರ ರಾಷ್ಟ್ರಪತಿ ಒಪ್ಪಿಗೆ ನೀಡಿದ್ದರು, ಹಾಗಾಗೀ ಈ ಸಿಂಧುತ್ವದ ಕುರಿತು ಚರ್ಚೆಯಾಗಬೇಕಿದ್ದು,  ಕೇಂದ್ರ ಸರ್ಕಾರ ಸ್ಪಷ್ಟನೆ ನೀಡುವಂತೆ ಮು.ನ್ಯಾ ದೀಪಕ್ ಮಿಶ್ರಾ ಸೂಚಿಸಿದ್ದಾರೆ. ಸಿಂಧುತ್ವದ ಬಗ್ಗೆ ಚರ್ಚೆ ಯಾದ ಬಳಿಕ, ಕಂಬಳದ ಕುರಿತು ವಿಚಾರಣೆ ನಡೆಯಲಿದ್ದು,  ವಿಚಾರಣೆ ಸೋಮವಾರಕ್ಕೆ ಮುಂದೂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Kambala Supreme court ಸುಗ್ರೀವಾಜ್ಞೆ ಸಿಂಧುತ್ವ