ಸದನದಿಂದ ದೂರ ಉಳಿದ ಶಾಸಕರು...


13-11-2017 1575

ಬೆಳಗಾವಿ: ಚುನಾವಣಾ ಸಿದ್ಧತೆಯಲ್ಲಿರುವ ರಾಜ್ಯ ವಿಧಾನಮಂಡಲ ಉಭಯ ಸದನಗಳ ಸದಸ್ಯರಿಗೆ ಮೊದಲ ದಿನವೇ ಅಧಿವೇಶನದ ಬಗ್ಗೆ ನಿರಾಸಕ್ತಿ ಕಂಡು ಬಂದಿದ್ದು, ಆದಿ ಭಾಗದಲ್ಲೇ ಆರಂಭಿಕ ವಿಘ್ನ ಎದುರಾಗಿತ್ತು. ಮೊದಲ ದಿನ ಸಂಭ್ರಮದಿಂದ ಕಲಾಪದಲ್ಲಿ ಭಾಗವಹಿಸಬೇಕಾಗಿದ್ದ ಶಾಸಕರು ಸದನದಿಂದ ದೂರ ಉಳಿದಿದ್ದರು. ಕೋರಂ ಕೊರತೆಯಿಂದ 10 ನಿಮಿಷಗಳ ಕಾಲ ವಿಧಾನಸಭೆ ಕಲಾಪ ಮುಂದೂಡಿದ ಪ್ರಸಂಗ ನಡೆಯಿತು. ಆಡಳಿತ -ಪ್ರತಿಪಕ್ಷ ಸದಸ್ಯರ ನಿರುತ್ಸಾಹಕ್ಕೆ ಚಳಿಗಾಲದ ಅದಿವೇಶನ ಸಾಕ್ಷಿಯಾಗಿತ್ತು.

ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ನಿಗದಿತ ಸಮಯಕ್ಕೆ ಸದನ ಪ್ರವೇಶಿಸಿದರು. ಲಗು ಬಗೆಯಿಂದ ಸದನ ನಡೆಸಲು ಆಸಕ್ತರಾಗಿದ್ದರು. ಆದರೆ ಕೋರಂ ಕೊರತೆ ಸಭಾಧ್ಯಕ್ಷರ ಉತ್ಸಾಹಕ್ಕೆ ತಣ್ಣೀರೆರಚಿತು. ಸದನದಲ್ಲಿ ಕೋರಂಗೆ ಅಗತ್ಯವಾದ 24 ಮಂದಿ ಇರಲಿಲ್ಲ. ಆಡಳಿತ ಪಕ್ಷದ ಸ್ಥಾನದಲ್ಲಿ ಸಚಿವರಾದ ಕಾಗೋಡು ತಿಮ್ಮಪ್ಪ, ಡಿ.ಕೆ.ಶಿವಕುಮಾರ್ ಮಾತ್ರ ಇದ್ದರು. ಪ್ರತಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಎಚ್.ಡಿ.ಕುಮಾರಸ್ವಾಮಿ ಅವರೂ ಹಾಜರಿರಲಿಲ್ಲ. ಬಿಜೆಪಿ ಸದಸ್ಯರ ಸಂಖ್ಯೆ ಆರು ದಾಟಿರಲಿಲ್ಲ. ಇದರಿಂದ ತೀವ್ರ ಅಸಮಾಧಾನಗೊಂಡ ಸ್ಪೀಕರ್ ಸದನವನ್ನು ಹತ್ತು ನಿಮಿಷ ಮುಂದೂಡಿದರು.

ಗಣ್ಯರ ನಿಧನಕ್ಕೆ ಸಂತಾಪ ಸೂಚನೆ ಹೊರತಾಗಿ ಉಳಿದ ಕಲಾಪ ಇಲ್ಲದ ಕಾರಣ ಸದಸ್ಯರು ಹಾಜರಾಗುವ ಆಸಕ್ತಿ ತೋರಿಸಿರಲಿಲ್ಲ. ಹೊರ ಜಿಲ್ಲೆಗಳಿಂದ ಬರಬೇಕಾದ ಶಾಸಕರು ಇನ್ನೂ ಬೆಳಗಾವಿ ತಲುಪಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಸದನ ಆರಂಭವಾಗಿ ನಂತರ ದಿನದ ಮಟ್ಟಿಗೆ ಕಲಾಪ ಮುಂದೂಡಲಾಯಿತು.

ಈ ಮಧ್ಯೆ ಶಾಸನ ಸಭೆ ಕಲಾಪಗಳನ್ನು ನಿಗದಿತ ಅವಧಿಯಲ್ಲಿ ಆರಂಭಿಸಬೇಕು. ಕೋರಂ ಆಗುವವರೆಗೂ ಕಾಯದೇ ಸ್ಪೀಕರ್ ಕಲಾಪ ಆರಂಭಕ್ಕೆ ಮುಂದಾಗಬೇಕು ಎಂದು ರಾಜ್ಯಪಾಲರು ಸ್ಪೀಕರ್ ಅವರಿಗೆ ಪತ್ರ ಬರೆದಿದ್ದಾರೆ. ಹಿಂದೆ ಕೋರಂ ಆಗುವವರೆಗೂ ಕಾಯುತ್ತಿದ್ದ ಸ್ಪೀಕರ್ ಅವರು ಇಂದು ನಿಗದಿತ ಅವಧಿಯಲ್ಲಿಯೇ ಕಲಾಪ ಆರಂಭಿಸುವ ಮೂಲಕ ಶಿಸ್ತು ತರಲು ಯತ್ನಿಸಿದ್ದು ಗಮನ ಸೆಳೆಯಿತು.

ವಿಧಾನಪರಿಷತ್‍ನಲ್ಲಿ ಸಚಿವರ ಗೈರು ಹಾಜರಿಯನ್ನು ಪ್ರಶ್ನಿಸಿ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಮೊದಲ ದಿನವೇ ಸಭಾತ್ಯಾಗ ಮಾಡಿದ ಘಟನೆಗೆ ಸದನ ಸಾಕ್ಷಿಯಾಯಿತು. ಇನ್ನು ಮೇಲ್ಮನೆ ಕಲಾಪ ಆರಂಭವಾಗುತ್ತಿದ್ದಂತೆಯೇ ಕೆ.ಸ್.ಈಶ್ವರಪ್ಪ ವಿಷಯ ಪ್ರಸ್ತಾಪಿಸಿ ಸದನದಲ್ಲಿ ಸಚಿವರ ಗೈರು ಹಾಜರಿ ಎದ್ದು ಕಾಣುತ್ತಿದೆ ಯಾರಿಗೆ ಪ್ರಶ್ನೆ ಕೇಳುವುದು, ಯಾರಿಂದ ಉತ್ತರ ಪಡೆಯುವುದು ಎಂದು ತರಾಟೆಗೆ ತೆಗೆದುಕೊಂಡರು. ಈ ಸನ್ನಿವೇಶದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಸದನದಲ್ಲಿ ಹಾಜರಿದ್ದ ಸಚಿವರಾದ ಯು.ಟಿ. ಖಾದರ್, ಮತ್ತು ಅಂಜನೇಯ ಸಚಿವರು ಇಲ್ಲೇ ಇದ್ದೇವೆ ಸದಸ್ಯರು ಯಾವುದೇ ಪ್ರಶ್ನೆ ಕೇಳಿದರೂ ಉತ್ತರ ಕೊಡುತ್ತೇವೆ ಎಂದರು. ಸಭಾಪತಿ ಶಂಕರಮೂರ್ತಿ ಮಧ್ಯ ಪ್ರವೇಶಿಸಿ ಸಂತಾಪ ನಿರ್ಣಯ ಮುಗಿದ ನಂತರ ಉಳಿದ ವಿಷಯಗಳತ್ತ ಗಮನ ಹರಿಸಲಾಗುವುದು ಎಂದು ಕೆರಳಿದ ಪ್ರತಿಪಕ್ಷ ಸದಸ್ಯರನ್ನು ಸಮಾಧಾನಪಡಿಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Speaker Belagavi ಕೋರಂ ಪ್ರತಿಪಕ್ಷ