ಒತ್ತಡದಲ್ಲಿ ರಾಜ್ಯ ಪೊಲೀಸರು...13-11-2017 379

ಬೆಂಗಳೂರು: ರಾಜ್ಯದಲ್ಲಿ 541 ನಾಗರಿಕರ ಸುರಕ್ಷತೆಯನ್ನು ಓರ್ವ ಪೊಲೀಸ್ ನೋಡಿಕೊಳ್ಳುವ ಒತ್ತಡದಲ್ಲಿರುವುದರಿಂದ ರಾಜ್ಯ ಪೊಲೀಸರ ದಕ್ಷತೆ ಕಡಿಮೆಯಾಗಿದೆ ಎನ್ನುವ ಅಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಪೊಲೀಸರ ಜನಸಂಖ್ಯೆ ವಿಷಯದಲ್ಲಿ ಕರ್ನಾಟಕ, ದೇಶದಲ್ಲಿ 25ನೇ ಸ್ಥಾನದಲ್ಲಿದೆ. ಪ್ರತಿ 440 ಜನರಿಗೆ ಓರ್ವ ಪೊಲೀಸ್ ಇರಬೇಕು ಎಂದು ವಿಶ್ವಸಂಸ್ಥೆ ನಿಗದಿ ಮಾಡಿದೆಯಾದರೂ  ಕರ್ನಾಟಕದಲ್ಲಿ 541 ನಾಗರಿಕರ ಸುರಕ್ಷತೆಯನ್ನು ಓರ್ವ ಪೊಲೀಸ್ ನೋಡಿಕೊಳ್ಳುತ್ತಿದ್ದಾರೆ. ಇದರಿಂದ ಪೊಲೀಸರ ದಕ್ಷತೆ ಕಡಿಮೆಯಾಗಿದೆ ಎಂದು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಬಿಪಿಆರ್‍ಆಂಡ್‍ಡಿ) ಬಿಡುಗಡೆ ಮಾಡಿದ ಅಂಕಿ ಅಂಶಗಳಿದ ಪತ್ತೆಯಾಗಿದೆ.

ಉತ್ತರ ಪ್ರದೇಶ, ಹರ್ಯಾಣ, ಜಾರ್ಖಂಡ್ ಮತ್ತು ಛತ್ತೀಸ್‍ಘಡ ಮತ್ತಿತರ ರಾಜ್ಯಗಳಿಗಿಂತಲೂ ಕರ್ನಾಟಕದ ಸ್ಥಾನ ಬಹಳ ಹಿಂದಿದೆ. ಕರ್ನಾಟಕಕ್ಕಿಂತಲೂ ಬಿಹಾರ, ಒಡಿಸ್ಸಾ, ಮಧ್ಯಪ್ರದೇಶ, ಪಶ್ಚಿಮಬಂಗಾಳ ಮತ್ತು ರಾಜಸ್ತಾನ ಅತಿ ಹೆಚ್ಚು ಮಂದಿ ಸುರಕ್ಷತೆಯ ಜಬಾಬ್ದಾರಿಯನ್ನು ಹೊಂದಿರುವುದು ಕಳವಳಕಾರಿ ಸಂಗತಿಯಾಗಿದೆ.

ಜಮ್ಮು ಕಾಶ್ಮೀರ ಮತ್ತು ಉತ್ತರ ಈಶಾನ್ಯ ರಾಜ್ಯಗಳಲ್ಲಿ ಅತಿ ಹೆಚ್ಚಿನ ಪೊಲೀಸರಿದ್ದಾರೆ ,ಈ ರಾಜ್ಯಗಳು ದೇಶದ ಅತಿ ಕಡಿಮೆ ಮಂದಿಯ ಸುರಕ್ಷತೆಯ  ಪೊಲೀಸರು ಪೈಕಿ ಮೊದಲ ಸ್ಥಾನ ಪಡೆದುಕೊಂಡಿದೆ.

ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇದ್ದ ಶೇಕಡಾ 36ರಷ್ಟು ಹುದ್ದೆಯನ್ನು ಶೇಕಡಾ 21ಕ್ಕೆ ಇಳಿಸಲಾಗಿದೆ. ನಾಲ್ಕು ವರ್ಷಗಳಲ್ಲಿ 24 ಸಾವಿರ ಸಿಬ್ಬಂದಿಯನ್ನು ನೇಮಿಸಿದ್ದೇವೆ. ಇದರಿಂದ ಇಲಾಖೆಯ ಮೇಲಿನ ಹೊರೆ ಕಡಿಮೆಯಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಅಂದರೆ 2008ರಿಂದ 2013ರವರೆಗೆ ಒಂದೇ ಒಂದು ನೇಮಕಾತಿ ಮಾಡಿರಲಿಲ್ಲ. ಪ್ರತಿ ವರ್ಷ ನಿರ್ದಿಷ್ಟ ಪ್ರಮಾಣದಲ್ಲಿ ಸಿಬ್ಬಂದಿ ನಿವೃತ್ತಿಯಾಗುತ್ತಾರೆ. ಕನಿಷ್ಠ ಅಷ್ಟು ಪ್ರಮಾಣದಲ್ಲಾದರೂ ನೇಮಕಾತಿ ಮಾಡಲೇಬೇಕಾಗುತ್ತದೆ. ಆದರೆ ಹಿಂದಿನ ಸರ್ಕಾರ ಒಂದೇ ಒಂದು ನೇಮಕಾತಿಯನ್ನೂ ಮಾಡಿರಲಿಲ್ಲ ಎಂದು, ಗೃಹ ಸಚಿವ ರಾಮಲಿಂಗಾ ರೆಡ್ಡಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಪೊಲೀಸ್ ಇಲಾಖೆಗೆ ಅನುಮೋದಿತ ಸಿಬ್ಬಂದಿಯ ಹುದ್ದೆಗಳು 1.02 ಲಕ್ಷ. ಆದರೆ ಇಲ್ಲಿ ಈಗ 22 ಸಾವಿರ ಹುದ್ದೆಗಳು ಖಾಲಿ ಇವೆ. ನಾಲ್ಕು ವರ್ಷಗಳಲ್ಲಿ 24000 ಸಿಬ್ಬಂದಿಯನ್ನು ನೇಮಿಸಲಾಗಿದೆ. ಎಲ್ಲಾ ಹುದ್ದೆ ಭರ್ತಿಯಾಗಲು 2021ರವರೆಗೆ ಕಾಯಬೇಕಾಗುತ್ತದೆ. ಈ ವೇಳೆ ರಾಜ್ಯದ ಜನಸಂಖ್ಯೆ ಕೂಡ ಶೇಕಡಾ 40ರಷ್ಟು ಹೆಚ್ಚಾಗಿರುತ್ತದೆ.

ಪ್ರತಿ ತಿಂಗಳು 20 ಪೊಲೀಸ್ ಸಿಬ್ಬಂದಿ ನಿವೃತ್ತಿಯಾಗುತ್ತಾರೆ. ನಾವು ಕಾಲಕಾಲಕ್ಕೆ ನೇಮಕಾತಿ ಮಾಡಿದರೆ ಸಿಬ್ಬಂದಿಯ ಕೊರತೆ ಉಂಟಾಗುವುದಿಲ್ಲ. ನಗರದಲ್ಲಿ ಪ್ರಸಕ್ತ 25000 ಪೊಲೀಸರು ಇದ್ದಾರೆ. ಇದು ಅತ್ಯುತ್ತಮ ಸಂಖ್ಯೆಯಾಗಿದೆ. ಆದರೆ ಸಿಬ್ಬಂದಿಯ ಕೊರತೆ ಇರುವುದರಿಂದಿ ಇವರು ಹೆಚ್ಚಿನ ಗಂಟೆ ಹಾಗೂ ಹೆಚ್ಚಿನ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾಗುತ್ತದೆ ಎನ್ನುತ್ತಾರೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್.

ಪೊಲೀಸರ ಒತ್ತಡ ಕಡಿಮೆ ಮಾಡಲು ಮತ್ತು ಅವರಿಗೆ ಮಾನಸಿಕ ಶಾಂತಿ ದೊರಕುವಂತೆ ಮಾಡಲು ಪ್ರತಿ ಜಿಲ್ಲೆಯಲ್ಲೂ ಅವರಿಗೆ ಮಾನಸಿಕ ತಜ್ಞರಿಂದ ಕೌನ್ಸಿಲಿಂಗ್ ನೀಡಲು ಎಪ್ರಿಲ್ ತಿಂಗಳಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಅತ್ಯುತ್ತಮ ತರಬೇತಿ ನೀಡಲು ಸಾಮರ್ಥ್ಯ ಇರುವ ಅಧಿಕಾರಿಗಳು, ಮಾನಸಿಕ ತಜ್ಞರನ್ನು ಒಂದು ವರ್ಷದ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಇಲಾಖೆ ಕಡತ ಸಿದ್ಧಪಡಿಸಿದೆ. ಒಟ್ಟು 59 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರ ನಡೆಯಲಿದೆ. 9 ಹಿರಿಯ ಅಧಿಕಾರಿಗಳು ಮತ್ತು 50 ಮಾನಸಿಕ ತಜ್ಞರ ಅಗತ್ಯವಿದೆ ಎಂದು ಮನವಿ ಸಲ್ಲಿಸಲಾಗಿದೆ. ಎಲ್ಲ ಪ್ರಕ್ರಿಯೆ ಮುಗಿದಿದೆ, ಪಟ್ಟಿಯನ್ನು ನಾನು ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೆ ಕಳುಹಿಸಿದ್ದೇನೆ. ಅಲ್ಲಿಂದ ಅನುಮೋದನೆ ದೊರೆತ ಬಳಿಕ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ನೇಮಕಾತಿ ಮತ್ತು ತರಬೇತಿ) ಆರ್. ಔರಾದ್ಕರ್ ಮಾಹಿತಿ ನೀಡಿದ್ದಾರೆ.


ಒಂದು ಕಮೆಂಟನ್ನು ಬಿಡಿ