ವರ್ಗಾವಣೆ: ಐಎಎಸ್ ಅಧಿಕಾರಿಗಳು ಗರಂ


11-11-2017 1115

ಬೆಂಗಳೂರು: ಪದೇ ಪದೇ ನಮ್ಮನ್ನು ವರ್ಗಾವಣೆ ಮಾಡುತ್ತಿದ್ದರೆ ನಿರೀಕ್ಷಿತ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕೆಲ ಐಎಎಸ್ ಅಧಿಕಾರಿಗಳು ಸರ್ಕಾರದ ಕಾರ್ಯ ವೈಖರಿ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಟಿಆ ಅವರಿಗೆ ಕೆಲ ಹಿರಿಯ ಐಎಎಸ್ ಅಧಿಕಾರಿಗಳು ಪತ್ರ ಬರೆದಿದ್ದು , ಕನಿಷ್ಠ ಪಕ್ಷ ಒಂದು ಇಲಾಖೆಯಲ್ಲಿ ಎರಡು ವರ್ಷವಾದರೂ ಕೆಲಸ ಮಾಡಲು ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು(ಡಿಸಿ), ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಪಿಸಿ)ಗಳ ಸಭೆ ನಡೆಸಿದ್ದರು.

ಸರ್ಕಾರ ಜಾರಿ ಮಾಡಿರುವ ಕಾರ್ಯಕ್ರಮಗಳನ್ನು ಕಾಲ ಮಿತಿಯೊಳಗೆ ಅನುಷ್ಠಾನ ಮಾಡದಿದ್ದರೆ ಅದಕ್ಕೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದರೆ ಮತದಾರರನ್ನು ಸೆಳೆಯಬಹುದು ಎಂಬುದು ಮುಖ್ಯಮಂತ್ರಿಗಳ ಲೆಕ್ಕಾಚಾರವಾಗಿತ್ತು.

ಆದರೆ ಸರ್ಕಾರ ಮೂರ್ನಾಲ್ಕು ತಿಂಗಳಿಗೊಮ್ಮೆ ವರ್ಗಾವಣೆ ಮಾಡುತ್ತಿದ್ದರೆ ನಾವು ಕಾರ್ಯಕ್ರಮಗಳನ್ನು ಜಾರಿ ಮಾಡಲು ಹೇಗೆ ಸಾಧ್ಯ, ಎಂಬ ಪ್ರಶ್ನೆಯನ್ನು ಹಿರಿಯ ಮತ್ತು ಕಿರಿಯ ಐಎಎಸ್ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ