‘ಸಿದ್ದರಾಮಯ್ಯರ ಸರ್ಟಿಫಿಕೇಟ್ ಬೇಕಿಲ್ಲ’


10-11-2017 645

ಬೆಂಗಳೂರು: ಕಾಂಗ್ರೆಸ್ ಮುಖಂಡ ಎ.ಮಂಜುನಾಥ್ ಅವರು, ಇಂದು ಜೆಡಿಎಸ್ ವರಿಷ್ಠರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರು, ಮಾಗಡಿ ವಿಧಾನಸಭಾ ಕ್ಷೇತ್ರದ ಜಿ.ಪಂ.ಸದಸ್ಯ ಹಾಗೂ ಅವರ ಸಾವಿರಾರು ಬೆಂಬಲಿಗರು ನಮ್ಮ ಪಕ್ಷಕ್ಕೆ ಸೇರಿದ್ದಾರೆ, ಸಾಂಕೇತಿಕವಾಗಿ ಮಂಜು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದೇನೆ ಎಂದರು.

ಮುಂದಿನ ತಿಂಗಳು ಶ್ರೀರಂಗಪಟ್ಟಣದ ರವೀಂದ್ರ ಶ್ರೀಕಂಠಯ್ಯ ಪಕ್ಷ ಸೇರಲಿದ್ದಾರೆ, ಇವತ್ತಿನಿಂದ ಮಂಜು ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುವ ಜವಾಬ್ದಾರಿಯನ್ನ ತೆಗೆದುಕೊಂಡಿದ್ದಾರೆ. ನಾನು ರಾಜ್ಯಾದ್ಯಂತ ಪ್ರವಾಸ ಮಾಡ್ತಿದ್ದೇನೆ, ಜನತೆ ರಾಷ್ಟ್ರೀಯ ಪಕ್ಷಗಳ ಮೇಲೆ ಅವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.

ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವ ವಿರೋಧ ಪಕ್ಷಗಳ ನಾಯಕರು, ಬಹಿರಂಗವಾಗಿ ಮಾತನಾಡುವುದು ಬೇರೆ, ಆದರೆ ನಾಲ್ಕು ಗೋಡೆಗಳ ಮಧ್ಯೆ ಅವರು ಮಾತನಾಡುವಾಗ ಜೆಡಿಎಸ್ ಗೆ ಸಿಗುತ್ತಿರುವ ಬೆಂಬಲದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ, ಈ ಬಾರಿ ನಮ್ಮ ಪಕ್ಷದ ಗುರಿಯನ್ನು ಮುಟ್ಟುತ್ತೇವೆ, ನಾವು ಗೆಲವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಮಾತನಾಡಿ, ಟಿಪ್ಪು ಜಯಂತಿ ಆಚರಣೆಯಲ್ಲಿ ಸರ್ಕಾರದ ಮೇಲೆ ಅನುಮಾನ ಬಂದಿದೆ. ರಾಜ್ಯದ ಹಲವೆಡೆ 144 ಸೆಕ್ಷನ್ ಜಾರಿ ಮಾಡಿ ಟಿಪ್ಪುಗೆ ಅಗೌರವ ಸೂಚಿಸುವ ಅಗತ್ಯವಿತ್ತಾ? ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ ಕೂಡ ಅಗೌರವವನ್ನುಂಟು ಮಾಡುತ್ತಿದೆ ಎಂದರು. ಟಿಪ್ಪು ಹೆಸರನ್ನು ಮುಂದಿಟ್ಟುಕೊಂಡು, ಮತಬ್ಯಾಂಕ್ ರಾಜಕೀಯ ಮಾಡಲು ಸರ್ಕಾರ ಮುಂದಾಗಿದೆ ಎಂದು ಟೀಕಿಸಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿಚಾರವಾಗಿ ಮಾತನಾಡಿ, ಅವರು ಸರ್ಕಾರದ ಅಧಿಕೃತ ಪ್ರತಿನಿಧಿ ಅಲ್ಲ, ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ವ್ಯಕ್ತಿ, ಸೋಲಾರ್ ಹಗರಣದಲ್ಲಿ ಕಳಂಕವನ್ನು ಹೊತ್ತಿರುವ ವ್ಯಕ್ತಿಯನ್ನ ಕಾಂಗ್ರೆಸ್ ಉಸ್ತುವಾರಿಗೆ ನೇಮಕ ಮಾಡಿದೆ, ಕಾಂಗ್ರೆಸ್ ದುರ್ಗತಿಯ ಬಗ್ಗೆ ಜನ ತೀರ್ಮಾನ ಮಾಡ್ತಾರೆ, ಅವರನ್ನು ಕಳಿಸಿ ಅಂತಾ ನಾನು ಹೇಳಲ್ಲ, ಕಾಂಗ್ರೆಸ್ ತೀರ್ಮಾನ ಮಾಡಲಿ, ನಾನು ಕಳಿಸಿ ಅಂತಾ ಹೇಳಿದ್ರೆ, ಕುಮಾರಸ್ವಾಮಿ ಅವರ ಸಲಹೆ ಬೇಕಿಲ್ಲ ಅಂತಾ ಸಿದ್ದರಾಮಯ್ಯ ಮಾತಾಡೋದು ಬೇಡ, ಗ್ರಾಮ ವಾಸ್ತವ್ಯದ ಬಗ್ಗೆ ಸಿದ್ದರಾಮಯ್ಯರ ಸರ್ಟಿಫಿಕೇಟ್ ಬೇಕಿಲ್ಲ ಎಂದರು. ನನ್ನ ಗ್ರಾಮವಾಸ್ತವ್ಯ ಕಾಪಿ ಮಾಡಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ, ಅದನ್ನೂ ಕೂಡ ಸರಿಯಾಗಿ ಕಾಪಿ ಮಾಡಲು ಸಿದ್ದರಾಮಯ್ಯ ತಮ್ಮ ಪಕ್ಷದ ಮುಖಂಡರಿಗೆ ಕಲಿಸಿಲ್ಲ ಎಂದು ವ್ಯಂಗವಾಡಿದ್ದು, ಸಿದ್ದರಾಮಯ್ಯ ಅವರನ್ನ ಮೆಚ್ಚಿಸಲು ನಾನು ಗ್ರಾಮವಾಸ್ತವ್ಯ ಮಾಡ್ತಿಲ್ಲ ಎಂದು ಗುಡುಗಿದರು.

 

 


ಒಂದು ಕಮೆಂಟನ್ನು ಬಿಡಿ