ಡೀಸಲ್ ಕಳ್ಳರ ಗ್ಯಾಂಗ್ ಅರೆಸ್ಟ್


03-11-2017 1206

ಬೆಂಗಳೂರು: ಟ್ಯಾಂಕರ್‍ ಗಳಿಂದ ಪೆಟ್ರೋಲ್- ಡೀಸಲ್ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‍ನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಸಿಸಿಬಿ ಪೊಲೀಸರು 40 ಲಕ್ಷ 80 ಸಾವಿರ ಮೌಲ್ಯದ 60 ಸಾವಿರ ಡೀಸಲ್‍ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸಕೋಟೆಯ ದೇವನಗೊಂದಿ ವೆಂಕಟನಾದಯ್ಯ (30), ಹಾಸನದ ಕಾಳಮಾರನಹಳ್ಳಿಯ ಗುರುರಾಜ್ (37), ಕೋರವಂಗಲದ ಮಲ್ಲೇಶ್ (35), ಬಿ.ಎಸ್.ಕೆ 2ನೇ ಹಂತದ ಭವಾನಿ ನಗರದ ಗೋವಿಂದರಾಜು (41)ಬಂಧಿತ ಗ್ಯಾಂಗ್‍ನ ಆರೋಪಿಗಳಾಗಿದ್ದಾರೆ. ಗ್ಯಾಂಗ್‍ ನಲ್ಲಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಹೊಸಕೋಟೆಯ ಮಾಕನಹಳ್ಳಿಯ ಮಂಜುನಾಥನಿಗಾಗಿ ತೀವ್ರ ಶೋಧ ನಡೆಸಲಾಗಿದೆ .

ಆರೋಪಿಗಳು ಗ್ಯಾಂಗ್ ಕಟ್ಟಿಕೊಂಡು ದೇವನಗೊಂದಿ, ಇನ್ನಿತರ ಕಡೆಗಳಲ್ಲಿ ರಸ್ತೆ ಪಕ್ಕ ಟ್ಯಾಂಕರ್ ನಿಲ್ಲಿಸಿ ಚಾಲಕರು ಮಲಗಿರುವ ವೇಳೆ ಡೀಸಲ್ ಹಾಗೂ ಪೆಟ್ರೋಲ್ ಕಳವು ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಆರೋಪಿಗಳು ಈ ಕೃತ್ಯದಲ್ಲಿ ತೊಡಗಿದ್ದು, ಕಳವು ಮಾಡಿದ ಡೀಸಲ್ ಹಾಗೂ ಪೆಟ್ರೋಲ್‍ ನನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದರು.

ಮೇಡಹಳ್ಳಿಯ ಗಾಯಿತ್ರಿ ಟಿಂಬರ್ ಯಾರ್ಡ್ ಹಿಂಭಾಗದಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ನಲ್ಲಿ  ಪೆಟ್ರೋಲ್ ಕಳವು ಮಾಡುತ್ತಿದ್ದ ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು, ಜಂಟಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ತಿಳಿಸಿದ್ದಾರೆ.

ಬಂಧಿತರಿಂದ 40 ಲಕ್ಷ 80 ಸಾವಿರ ಮೌಲ್ಯದ 60 ಸಾವಿರ ಲೀಟರ್ ಡೀಸಲ್‍ನ 3 ಟ್ಯಾಂಕರ್‍ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಡಿಸಿಪಿ ಜಿನೇಂದ್ರ ಕಣಗಾವಿ ನೇತೃತ್ವದ ತಂಡ ಬಂಧಿಸಿ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಆರೋಪಿಗಳು ಕೃತ್ಯವೆಸಗಲು ಟ್ಯಾಂಕರ್ ಲಾರಿಗಳ ಚಾಲಕರು ಶಾಮೀಲಾಗಿರುವ ಅನುಮಾನವಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದರು.


ಒಂದು ಕಮೆಂಟನ್ನು ಬಿಡಿ