‘ದುರಾಡಳಿತ ಪರಿವರ್ತನೆಗಾಗಿ ರ‍್ಯಾಲಿ’03-11-2017 349

ಹಾಸನ: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ, ಮಾಡಿದ ದುರಾಡಳಿತವನ್ನು ಪರಿವರ್ತನೆ ಮಾಡಿಕೊಳ್ಳಲು ಬಿಜೆಪಿ ರಾಜ್ಯಾದ್ಯಂತ ಪರಿವರ್ತನಾ ರ‍್ಯಾಲಿ ಮಾಡುತ್ತಿದೆ. ಆದರೆ ನಾವು ಅಂತಹ ಕೆಲಸ ಮಾಡಿಲ್ಲದ ಕಾರಣ ನಾವು ಜನರ ಮನೆ ಮನೆಗೆ ಹೋಗುತ್ತೇವೆ ಎಂದು ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಹಾಸನಲ್ಲಿಂದು ಜೆಡಿಎಸ್ ಕಾರ್ಯಕರ್ತರ ಸಭೆಗೆ ಆಗಮಿಸಿದ ಸಂದರ್ಭ, ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಆಡಳಿತದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬೇಲೂರು ಹಳೇಬೀಡಿನ ಎಲ್ಲ ಕೆರೆ ಕಟ್ಟೆಗಳಿಗೂ ನೀರು ಹರಿಸುವುದಾಗಿ ಹೇಳಿದ್ದರು. ಆದರೆ ನೀರು ಹರಿಸಿದರಾ ಇಲ್ಲಾ, ಆದರೆ ಮಾಜಿ ಪ್ರಧಾನಿ ದೇವೇಗೌಡರು ಬೇಲೂರಿನಲ್ಲಿ ಯಗಚಿ ಅಣೆಕಟ್ಟು ಕಟ್ಟಿಸಿದ್ದರಿಂದ ಇಲ್ಲಿನ ಸುತ್ತಮುತ್ತಲಿನ ರೈತರಿಗೆ ಮತ್ತು ಜನರಿಗೆ ಅನುಕೂಲವಾಗಿದೆ ಎಂದರು.

ಇನ್ನು ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಮಾಡಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಆದರೆ ಮುಂಗಾರು ಮಳೆ ಕೈಕೊಟ್ಟಿದ್ದು ರೈತರ ಬಹುತೇಕ ಬೆಳೆಗಳು ನಾಶವಾಗಿವೆ. ಮಳೆಯ ಅಭಾವದಿಂದ ಆಲೂಗೆಡ್ಡೆ ಬೆಳೆ ಕೈಕೊಟ್ಟಿದ್ದರಿಂದ ಬೇಸತ್ತು ಗಿಡಗಳನ್ನು ಕಿತ್ತುಹಾಕಿದ್ದು, ಹೊಲಕ್ಕೆ ಹೋಗಿ ಅಧಿಕಾರಿಗಳು ಏನು ಸಮೀಕ್ಷೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.


ಒಂದು ಕಮೆಂಟನ್ನು ಬಿಡಿ