‘ಯಾತ್ರೆ ಮೂಲಕ ಯುದ್ಧ ಆರಂಭವಾಗಿದೆ’


02-11-2017 1223

ಬೆಂಗಳೂರು: ಬಿಜೆಪಿಯ ‘ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ  ಬಿ.ಎಸ್.ಯಡಿಯೂರಪ್ಪ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ವೇಳೆ ಮಾತನಾಡಿದ ಯಡಿಯೂರಪ್ಪನವರು, ಪರಿವರ್ತನಾ ಯಾತ್ರೆಯ ಮೂಲಕ ಯುದ್ಧ ಆರಂಭವಾಗಿದೆ. ಈ ಯುದ್ಧದಲ್ಲಿ ಗೆಲ್ಲಲು ನಮ್ಮ ಸೈನಿಕರು ವಿರೋಚಿತವಾಗಿ ಹೋರಾಡಬೇಕು. 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.

ಈ ದೇಶ ಕಂಡ ಮಹಾನ್ ಭ್ರಷ್ಟ ಸರ್ಕಾರ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ನಾವು ಅಧಿಕಾರದಲ್ಲಿದ್ದಾಗ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದೆವು. ಆದರೆ ಇವರು ಬಂದ ನಂತರ ಕರ್ನಾಟಕವನ್ನು ಪುನ: ಹಿಂದಕ್ಕೆಳೆದುಕೊಂಡು ಹೋದರು. ಇಂತಹ ಸರ್ಕಾರ ರಾಜ್ಯಕ್ಕೆ ಬೇಕಾಗಿಲ್ಲ. ಹೀಗಾಗಿ ರಾಜ್ಯದ ಪ್ರತಿಯೊಂದು ಬೂತ್‍ಗಳಲ್ಲಿ ಕನಿಷ್ಟ ಎಪ್ಪತ್ತು ಮತಗಳು ಬಿಜೆಪಿಗೆ ದಕ್ಕುವಂತೆ ಮಾಡಿ, ಮುಂದಿನ ವಿಧಾನಸಭಾ ಚುನಾವಣೆ ಎಂಬ ಯುದ್ಧದಲ್ಲಿ ಗೆಲ್ಲುವಂತೆ ಮಾಡಿ ಎಂದು ಮನವಿ ಮಾಡಿಕೊಂಡರು.

ಸಿದ್ದರಾಮಯ್ಯ ಅವರನ್ನು ಕಂಡರೆ ಪ್ರಧಾನಿ ನರೇಂದ್ರಮೋದಿ ಅವರಿಗೆ ಭಯವಂತೆ. ಇದು ವರ್ಷದ ಅತ್ಯುತ್ತಮ ಜೋಕು ಎಂದು ಬಣ್ಣಿಸಿದ ಅವರು, ಇಂತಹ ಮಾತುಗಳನ್ನಾಡುವ ಮೂಲಕ ಜನರ ಮನಸ್ಸಿಗೆ ನೋವುಂಟು ಮಾಡುತ್ತಿದ್ದೇನೆ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಿರಬೇಕಿತ್ತು ಎಂದರು.

ಕರ್ನಾಟಕ ನವ ಪರಿವರ್ತನಾ ಯಾತ್ರೆಯ ಮೂಲಕ ಮುಂದಿನ ಮೂರು ತಿಂಗಳ ಕಾಲ ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತೇನೆ. ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನರಿಗೆ ವಿವರ ನೀಡುತ್ತೇನೆ. ನೀವೆಲ್ಲ ಈ ಯುದ್ಧದಲ್ಲಿ ನಮ್ಮ ಜತೆಗಿರಿ, ವೀರೋಚಿತವಾಗಿ ಹೋರಾಡಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು. ಕೇಂದ್ರದಲ್ಲಿ ಮೋದಿ-ಕರ್ನಾಟಕದಲ್ಲಿ ಯಡಿಯೂರಪ್ಪ ಎಂಬ ಮಂತ್ರ ಮೊಳಗುವಂತೆ ಮಾಡಿ ಎಂದ ಅವರು, ನಾಡಿನ ಅನ್ನದಾತ ರೈತರಿಂದ ಹಿಡಿದು ಎಲ್ಲ ವರ್ಗಗಳ ಪಡುತ್ತಿರುವ ಸಂಕಷ್ಟವನ್ನು ದೂರ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Kannada News Karnataka ವಿರೋಚಿತ 150 ಕ್ಷೇತ್ರ