ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ..?


31-10-2017 4585

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಲು ಸರ್ಕಾರ ಸಜ್ಜಾಗಿದ್ದು ಹೊಸ ವರ್ಷದ ಆರಂಭದಲ್ಲೇ ಅವರ ವೇತನವನ್ನು ಹೆಚ್ಚಿಸಲು ನಿರ್ಧರಿಸಿದೆ. ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು ಹಿರಿಯ ಅಧಿಕಾರಿ ಶ್ರೀನಿವಾಸಮೂರ್ತಿ ಅವರ ಅಧ್ಯಕ್ಷತೆಯ ಆರನೇ ವೇತನ ಆಯೋಗ ಈಗಾಗಲೇ ಸರ್ಕಾರಿ ನೌಕರರ ವೇತನವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳಗೊಳಿಸಿ ವರದಿ ಸಿದ್ಧಪಡಿಸಿದ್ದಾರೆ ಎಂದು ಹೇಳಿವೆ.

ಆದರೆ ತಕ್ಷಣವೇ ಸರ್ಕಾರಿ ನೌಕರರ ವೇತನವನ್ನು ಹೆಚ್ಚಳ ಮಾಡಿರುವ ಕುರಿತು ಪ್ರಕಟಿಸಿದರೆ ಚುನಾವಣೆ ಸಂದರ್ಭದಲ್ಲಿ ಹೆಚ್ಚಿನ ಅನುಕೂಲವಾಗುವುದಿಲ್ಲ ಎಂದು ಸರ್ಕಾರ ಭಾವಿಸಿದ್ದು ಇದೇ ಕಾರಣಕ್ಕಾಗಿ ಆರನೇ ವೇತನ ಆಯೋಗ ತಕ್ಷಣವೇ ವರದಿ ನೀಡದಂತೆ ಸೂಚಿಸಿದೆ ಎಂಬುದು ಮೂಲಗಳ ಹೇಳಿಕೆ. ವಿಧಾನಸಭೆ ಚುನಾವಣೆ ಸನಿಹದಲ್ಲಿರುವಾಗ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಿದರೆ ಸಹಜವಾಗಿಯೇ ಚುನಾವಣೆಯಲ್ಲಿ ಅದರ ಲಾಭ ದಕ್ಕುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರ ಎಂಬುದು ಮೂಲಗಳ ಹೇಳಿಕೆ. ಆರು ಲಕ್ಷಕ್ಕೂ ಹೆಚ್ಚಿರುವ ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರು ಈ ವೇತನ ಆಯೋಗದ ಶಿಫಾರಸಿನ ಮೂಲಕ ಲಾಭ ಪಡೆಯಲಿದ್ದು  ಆ ಮೂಲಕ ಹತ್ತು ಲಕ್ಷಕ್ಕೂ ಹೆಚ್ಚು ಮಂದಿಯ ಮೇಲೆ ಇದರ ಪರಿಣಾಮವಾಗಲಿದೆ.

ಹೀಗಾಗಿ ತಕ್ಷಣವೇ ಸರ್ಕಾರಿ ನೌಕರರ ವೇತನವನ್ನು ಹೆಚ್ಚಳ ಮಾಡುವ ಬದಲು ಇನ್ನಷ್ಟು ಕಾಲ ಕಾಯಲು ರಾಜ್ಯ ಸರ್ಕಾರ ನಿರ್ಧರಿಸಿದ ಪರಿಣಾಮವಾಗಿ ಬೇರೆ ದಾರಿ ಕಾಣದೆ ಆರನೇ ವೇತನ ಆಯೋಗ ಕೂಡಾ, ವರದಿ ನೀಡಲು ಮತ್ತಷ್ಟು ಕಾಲಾವಕಾಶ ಬೇಕು ಎಂದು ಕೋರಿಕೊಂಡಿತ್ತು. ಅದರ ಕೋರಿಕೆಯನ್ನು ಪರಿಗಣಿಸಿದ ಸರ್ಕಾರ ಮತ್ತಷ್ಟು ಕಾಲಾವಕಾಶ ನೀಡಿದ್ದು ಹೊಸ ವರ್ಷದ ವೇಳೆಗೆ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಲು ತೀರ್ಮಾನಿಸಿದೆ. ಇದೇ ಮೂಲಗಳ ಪ್ರಕಾರ ಆರನೇ ವೇತನ ಆಯೋಗದ ವರದಿಯ ಪ್ರಕಾರ ಎಲ್ಲ ಹಂತಗಳ ಹಾಲಿ ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರಿಗೆ ಗಣನೀಯ ಪ್ರಮಾಣದಲ್ಲಿ ವೇತನ, ನಿವೃತ್ತಿ ವೇತನ ಲಭ್ಯವಾಗಲಿದೆ ಎನ್ನಲಾಗಿದೆ.


ಒಂದು ಕಮೆಂಟನ್ನು ಬಿಡಿ