ವಿದ್ಯುತ್ ಖರೀದಿ: ‘ಬೊಕ್ಕಸಕ್ಕೆ ನಷ್ಟವಾಗಿಲ್ಲ’


31-10-2017 1052

ಬೆಂಗಳೂರು: ವಿದ್ಯುತ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ತನಿಖೆ ಇದಿಗ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆ ಕಲ್ಪಿಸುವ ಎಲ್ಲಾ ಲಕ್ಷಣಗಳೂ ಗೋಚರಿಸತೊಡಗಿವೆ. 2011ರಲ್ಲಿ ವಿದ್ಯುತ್ ಖರೀದಿಗಾಗಿ ಟೆಂಡರ್ ಕರೆಯಲಾಗಿತ್ತು. ಜೆಎಸ್‍ಡಬ್ಲ್ಯೂ 20 ವರ್ಷಗಳ ಕಾಲ 3.60 ದರದಲ್ಲಿ ಪ್ರತಿ ಯೂನಿಟ್ ಪೂರೈಸುವುದಾಗಿ ಹೇಳಿತ್ತು. ಬೇರೆ ರಾಜ್ಯಗಳಲ್ಲಿ ಇದಕ್ಕಿಂತ ಕಡಿಮೆ ದರದಲ್ಲಿ ಪೂರೈಕೆ ಮಾಡಲು ಒಪ್ಪಂದ ಮಾಡಿಕೊಂಡಿರುವ ಜೆಎಸ್‍ಡಬ್ಲ್ಯೂ ಕರ್ನಾಟಕದಲ್ಲಿ ಹೆಚ್ಚಿನ ದರ ನಮೂದಿಸಿದೆ. ಹೀಗಾಗಿ, ಟೆಂಡರ್ ರದ್ದು ಮಾಡಬೇಕು ಎಂದು ಹಣಕಾಸು ಇಲಾಖೆ ಶಿಫಾರಸು ಮಾಡಿತ್ತು.

ಸಚಿವ ಸಂಪುಟ ಇದಕ್ಕೆ ಸಮ್ಮತಿ ಸೂಚಿಸಿತ್ತು. ದೀರ್ಘಕಾಲದ ಟೆಂಡರ್ ರದ್ದು ಪಡಿಸಿದ್ದ ಅಂದಿನ ಸರ್ಕಾರ, ಅಲ್ಪಾವಧಿ ಒಪ್ಪಂದದ ಮೇರೆಗೆ ಪ್ರತಿ ಯೂನಿಟ್‍ಗೆ 4ರಿಂದ 6ರ ದರದಲ್ಲಿ ಜೆಎಸ್ಡಬ್ಲ್ಯೂನಿಂದ ವಿದ್ಯುತ್ ಖರೀದಿಸಿತ್ತು. ದೀರ್ಘಾವಧಿ ಟೆಂಡರ್‍ ಗೆ ಹೋಗದೇ ಇದ್ದುದರಿಂದ ಬೊಕ್ಕಸಕ್ಕೆ 28,000 ಕೋಟಿ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿತ್ತು, ಇದು ತೀವ್ರ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಆರೋಪಗಳ ಬಗ್ಗೆ ತನಿಖೆಗೆ ಸದನ ಸಮಿತಿ ರಚಿಸಲಾಗಿತ್ತು.

ಸದನ ಸಮಿತಿ ಈ ಬಗ್ಗೆ ವ್ಯಾಪಕ ಪರಿಶೀಲನೆ ನಡೆಸಿ ವರದಿ ಸಿದ್ದ ಪಡಿಸಿದೆ, ಆದರೆ ಈ ವರದಿಗೆ  ಬಿಜೆಪಿ ಅಸಮ್ಮತಿ ಸೂಚಿಸಿದೆ. ಸದನ ಸಮಿತಿ ಸಭೆಯಲ್ಲಿ ಕರಡು ವರದಿಯನ್ನು ಮಂಡಿಸಿದಾಗ ಆಕ್ಷೇಪ ವ್ಯಕ್ತಪಡಿಸಿದ್ದ, ಬಿಜೆಪಿಯ ಬಸವರಾಜ ಬೊಮ್ಮಾಯಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ, ಅಂದು 3.60ರ ದರದಲ್ಲಿ ಖರೀದಿಸುವ ಒಪ್ಪಂದ ಮಾಡಿಕೊಂಡಿದ್ದರೆ 2014ರಿಂದ 20 ವರ್ಷ ಕಾಲ ಅದೇ ದರದಲ್ಲಿ ಖರೀದಿಸಬೇಕಾಗುತ್ತಿತ್ತು. ಈಗ ವಿದ್ಯುತ್ ದರ ಪ್ರತಿ ಯೂನಿಟ್‍ಗೆ 2 ಗೆ ಇಳಿಕೆಯಾಗಿದೆ. ಒಪ್ಪಂದ ಮಾಡಿಕೊಳ್ಳದೇ ಇದ್ದುದರಿಂದ ಲಾಭವಾಗಿದೆ ವಿನಾ ನಷ್ಟವಾಗಿಲ್ಲ ಎಂದು ಪ್ರತಿಪಾದಿಸಿದರು.


ಒಂದು ಕಮೆಂಟನ್ನು ಬಿಡಿ