ಧರ್ಮಸ್ಥಳದ ಸುತ್ತಮುತ್ತ ಭಾರೀ ಭದ್ರತೆ


27-10-2017 435

ದಕ್ಷಿಣ ಕನ್ನಡ: ಪ್ರಧಾನಿ ನರೇಂದ್ರ ಮೋದಿ, ಇದೇ ತಿಂಗಳ 29ರಂದು ಉಜಿರೆಯಲ್ಲಿ ನಡೆಯುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಹಿನ್ನೆಲೆ,  ವೇದಿಕೆ ಹಾಗೂ ಸಭಾಂಗಣ ನಿರ್ಮಾಣದ ತಯಾರಿ ಕಾರ್ಯ ಭರದಿಂದ ನಡೆಯುತ್ತಿದ್ದು , ಪ್ರಧಾನಮಂತ್ರಿಯವರ ವಿಶೇಷ ಭದ್ರತಾ ಪಡೆ ಎಸ್‌ಪಿಜಿ ಬೀಡು ಬಿಟ್ಟಿದೆ.

ಸ್ಪೆಷಲ್‌ ಪ್ರೊಟೆಕ್ಷನ್‌ ಗ್ರೂಪ್‌(ಎಸ್‌ಪಿಜಿ) ಪ್ರಮುಖ ಅಧಿಕಾರಿ ಎಮ್‌.ಪಿ.ಗುಪ್ತಾ ಸೇರಿದಂತೆ 11 ಅಧಿಕಾರಿಗಳ ತಂಡ ಉಜಿರೆ ಹಾಗೂ ಧರ್ಮಸ್ಥಳದಲ್ಲಿ ಸ್ಥಳ ಪರಿಶೀಲನೆ ನಡೆಸಿ ಭದ್ರತಾ ಕಾರ್ಯಗಳನ್ನು ನಡೆಸುತ್ತಿದೆ. ವೇದಿಕೆ ನಿರ್ಮಾಣ ಕಾರ್ಮಿಕರ ಮೇಲೆ ನಿಗಾ ಇರಿಸಲು ಪೊಲೀಸರನ್ನು ನೇಮಿಸಲಾಗಿದೆ.

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ನಕ್ಸಲ್‌ ನಿಗ್ರಹ ದಳದವರು ಕನ್ಯಾಡಿ, ಧರ್ಮಸ್ಥಳ, ಉಜಿರೆ ಸುತ್ತಮುತ್ತ ಕೂಂಬಿಂಗ್‌ ನಡೆಸುತ್ತಿದ್ದು ಎಲ್ಲಾ ಪರಿಸರವನ್ನೂ ಸೂಕ್ಷಮವಾಗಿ ಗಮನಿಸುತ್ತಿದ್ದಾರೆ. ಎಸ್‌ಪಿಜಿ ತಂಡವು ಉಜಿರೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ, ಸಂಘಟಕರ ಜತೆ ಸಮಾಲೋಚನಾ ಸಭೆ ನಡೆಸಿತು.

ದೇವರ ದರ್ಶನಕ್ಕೆ ಅವಕಾಶ: ಧರ್ಮಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಅ.28ರಂದು ಶನಿವಾರ ರಾತ್ರಿ 9ರವರೆಗೆ ಹಾಗೂ ಭಾನುವಾರ ಅಪರಾಹ್ನ 2 ಗಂಟೆ ಬಳಿಕ ದೇವರ ದರ್ಶನಕ್ಕೆ ಅವಕಾಶವಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. ಭಾನುವಾರ ಬೆಳಗ್ಗೆ 7ರಿಂದ 9ರವರೆಗೆ ಧರ್ಮಸ್ಥಳದಿಂದ ಉಜಿರೆವರೆಗೆ ರಸ್ತೆ ಮೂಲಕ ವಾಹನ ಸಂಚಾರಕ್ಕೆ ಮುಕ್ತ ಅವಕಾಶವಿದ್ದು ಬಳಿಕ ಪ್ರಧಾನಿ ನಿರ್ಗಮನದವರೆಗೆ ಅವಕಾಶವಿರುವುದಿಲ್ಲ . ಭಕ್ತಾದಿಗಳು ಹಾಗೂ ಸಾರ್ವಜನಿಕರು ಇದನ್ನು ಗಮನಿಸಿ ಸಹಕರಿಸುವಂತೆ ವಿನಂತಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಉಜಿರೆಯಲ್ಲಿ ಸಭಾ ವೇದಿಕೆ, ಸಭಾಂಗಣ ನಿರ್ಮಾಣ: ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಬೆಂಗಳೂರಿನಿಂದ ಆಗಮಿಸಿರುವ ಕಾರ್ಮಿಕರು ಬೃಹತ್‌ ಜರ್ಮನ್‌ ಮಾದರಿ ಚಪ್ಪರದ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಕ್ರೇನ್‌ಗಳ ಸಹಾಯದಿಂದ ಬೃಹತ್‌ ತೊಲೆಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. 200ಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಇಲ್ಲಿನ ಕ್ಷಣಕ್ಷಣದ ಬೆಳವಣಿಗೆಗಳನ್ನು ಗಮನಿಸಲಾಗುತ್ತದೆ. ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಎಸ್‌ಪಿಜಿಯ ಅರವಿಂದ್‌ ತಿಳಿಸಿದ್ದಾರೆ.

ವಾಹನ ಸಂಚಾರ ಮಾರ್ಗ ಬದಲಾವಣೆ: ಅಕ್ಟೋಬರ್ 29ರಂದು ಬೆಳಿಗ್ಗೆ 9 ಗಂಟೆಯಿಂದ ಪ್ರಧಾನಿ ನಿರ್ಗಮಿಸುವವರೆಗೆ ಉಜಿರೆ ಪೇಟೆಯ ದ್ವಾರದಿಂದ ಧರ್ಮಸ್ಥಳದವರೆಗೆ ಯಾವುದೇ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಬದಲಿ ರಸ್ತೆಗಳಲ್ಲಿ ಬರಬೇಕಾಗುತ್ತದೆ. ಶಿಶಿಲ, ಕೊಕ್ಕಡ ಕಡೆಯಿಂದ ಬರುವವರು ಧರ್ಮಸ್ಥಳದ ಕಲ್ಲೇರಿ ತನಕ ಬಂದು ಅಲ್ಲಿಂದ ಮುಂಡ್ರುಪ್ಪಾಡಿ, ಮುಂಡಾಜೆ ಮಾರ್ಗವಾಗಿ ಉಜಿರೆಗೆ ಬರಬೇಕು. ಉಡುಪಿ, ಕಾರ್ಕಳ, ಮೂಡುಬಿದ್ರೆಯಿಂದ ಬೆಂಗಳೂರಿಗೆ ಹೋಗುವವರು ಗುರುವಾಯನಕೆರೆ, ಉಪ್ಪಿನಂಗಡಿ ಮಾರ್ಗವಾಗಿ ತೆರಳಬೇಕು. ಕಾರ್ಯಕ್ರಮಕ್ಕೆ ಆಗಮಿಸುವವರು ಸಭಾ ಕಾರ್ಯಕ್ರಮಕ್ಕಿಂತ 2 ಗಂಟೆ ಮುಂಚಿತವಾಗಿ ಸಭಾ ಚಪ್ಪರದೊಳಗೆ ಹಾಜರಿರಬೇಕು ಎಂದು ತಿಳಿಸಿದ್ದಾರೆ.

ಪಾರ್ಕಿಂಗ್‌ ವ್ಯವಸ್ಥೆ: ಬೆಳ್ತಂಗಡಿ ಕಡೆಯಿಂದ ಬರುವವರು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಳದ ಬಳಿ ಹಾಗೂ ಬೆಳಾಲು ಕ್ರಾಸ್‌ನ ತುಳು ಗ್ರಾಮದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಗಿದ್ದು, ಉಜಿರೆ ದ್ವಾರದಿಂದ ಎಲ್ಲರೂ ನಡೆದುಕೊಂಡೇ ಸಭಾಂಗಣಕ್ಕೆ ಬರಬೇಕಾಗುತ್ತದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Kannada News Karnataka ಎಸ್‌ಪಿಜಿ ಧರ್ಮಸ್ಥಳ