'ಶೀಘ್ರದಲ್ಲೇ 1 ಲಕ್ಷ ವಸತಿ ಯೋಜನೆ ಜಾರಿ'


26-10-2017 1027

ಬೆಂಗಳೂರು: ಸ್ವಂತ ಸೂರು ಇಲ್ಲದೆ ಬೆಂಗಳೂರು ನಗರದಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವ ಬಡ ಕುಟುಂಬಗಳಿಗಾಗಿ ಶೀಘ್ರವೇ ಮುಖ್ಯಮಂತ್ರಿಯವರ ಒಂದು ಲಕ್ಷ ವಸತಿ ಯೋಜನೆ ಜಾರಿಗೆ ಬರಲಿದೆ. ಯೋಜನೆಗೆ ಚಾಲನೆ ನೀಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಇಂದು ವಸತಿ, ಕಾರ್ಮಿಕ ಸಚಿವರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಈ ವರೆಗೆ ಆಗಿರುವ ಪ್ರಗತಿ ಪರಿಶೀಲಿಸಿದರು.

ಬೆಂಗಳೂರು ಮಹಾನಗರದಲ್ಲಿ ಸ್ವಂತ ಮನೆ ಇಲ್ಲದ ಬಡವರಿಗೆ ವಸತಿ ಭಾಗ್ಯ ಕಲ್ಪಿಸುವ ಉದ್ದೇಶದಿಂದ ಒಂದು ಲಕ್ಷ ವಸತಿ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‍ನಲ್ಲಿಯೇ ಘೋಷಣೆ ಮಾಡಿದ್ದರು.  ಈ ಯೋಜನೆಗೆ ಸೆಪ್ಟೆಂಬರ್ 29ರಂದು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಕಳೆದ 10ರಂದು ಅಧಿಕೃತ ಆದೇಶವೂ ಹೊರ ಬಿದ್ದಿದೆ. ಯೋಜನೆಯನ್ನು ತ್ವರಿತವಾಗಿ ಜಾರಿಗೆ ತರಲು ರಾಜೀವ್‍ಗಾಂಧಿ ವಸತಿ ನಿಗಮ ಕಾರ್ಯೋನ್ಮುಖವಾಗಿದೆ.

ಇದು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಜತೆಗೆ ಸ್ವಂತ ಮನೆ ಇಲ್ಲದ ಮಹಾನಗರದ ಬಡವರಿಗೆ ವರದಾನವಾಗಲಿದೆ. ಕೂಡಲೇ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, 24 ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಒಂದು ಲಕ್ಷ ಮನೆಗಳ ನಿರ್ಮಾಣಕ್ಕೆ 1,100 ಎಕರೆ ಜಮೀನಿನ ಅಗತ್ಯವಿದೆ. ಇದಕ್ಕಾಗಿ ವಿವಿಧೆಡೆಗಳಲ್ಲಿ ಜಾಗ ಗುರುತಿಸಲಾಗಿದೆ. ನಗರದಲ್ಲಿ ಈಗಾಗಲೇ ಒತ್ತುವರಿ ತೆರವು ಮಾಡಿ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡಿದೆ. ಅಲ್ಲಿ ಬಡವರಿಗಾಗಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ನೆಲಮಹಡಿ ಸೇರಿದಂತೆ ಮೂರು ಅಂತಸ್ತಿನಲ್ಲಿ (ಜಿ+3) ಮನೆಗಳನ್ನು ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು. ಅಗತ್ಯವಾದ ಭೂಮಿಯನ್ನು ರಾಜೀವ್‍ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಇಂದಿನ ಸಭೆಯಲ್ಲಿ ಸೂಚಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ 430 ಎಕರೆ ಜಾಗವನ್ನು ಗುರುತಿಸಿದ್ದು, ನಿಗಮದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಒಪ್ಪಿಗೆ ಸೂಚಿಸಿದ್ದಾರೆ. ಬೆಂಗಳೂರು ಮಹಾನಗರದಲ್ಲಿ ಐದಕ್ಕಿಂತ ಹೆಚ್ಚು ವರ್ಷದಿಂದ ವಾಸ ಮಾಡುತ್ತಿರುವ ಹಾಗೂ ವಸತಿ ರಹಿತರಾಗಿರುವ, ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳವರು (ಬಿಪಿಎಲ್) ಯೋಜನೆಯ ಫಲಾನುಭವಿಗಳಾಗಲಿದ್ದಾರೆ.

ಫಲಾನುಭವಿಗಳಿಂದ ನವೆಂಬರ್ 15ರಿಂದ ಆನ್‍ಲೈನ್ ಮೂಲಕ ಅರ್ಜಿ ಸ್ವೀಕಾರ ಮಾಡಲಾಗುವುದು. ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ಶೇ.80ರಷ್ಟು ಮಂದಿಗೆ ಹಾಗೂ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ವ್ಯಾಪ್ತಿಯಲ್ಲಿರುವ (ಬಿಎಂಆರ್‍ಡಿಎ) ಶೇ. 20ರಷ್ಟು ಮಂದಿ ಯೋನೆಯ ಲಾಭ ಪಡೆದುಕೊಳ್ಳಬಹುದು.  ಒಂದು ಮನೆಗೆ 5.50 ಲಕ್ಷ ರೂ. ವೆಚ್ಚವಾಗಲಿದೆ. ಅರ್ಜಿ ಶುಲ್ಕವಾಗಿ ಸಾಮಾನ್ಯ ವರ್ಗದವರಿಗೆ ಒಂದು ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ 50 ಸಾವಿರ ರೂ. ನಿಗಧಿಯಾಗಿದೆ.

ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 2.70 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ 3.70 ಲಕ್ಷ ರೂ.ಗಳವರೆಗೆ ಸಬ್ಸಿಡಿ ರೂಪದಲ್ಲಿ ನೆರವು ಸಿಗಲಿದೆ. ಉಳಿದ ಮೊತ್ತವನ್ನು ಬ್ಯಾಂಕ್‍ಗಳಿಂದ ಸಾಲ ಪಡೆಯಲು ಅವಕಾಶ ಮಾಡಿಕೊಡಲಾಗುವುದು.  ಈ ಸಂಬಂಧ ಬ್ಯಾಂಕ್‍ಗಳ ಜೊತೆಗೂ ಮಾತುಕತೆ ನಡೆದಿದೆ. ಸಾಲ ಸೌಲಭ್ಯ ಒದಗಿಸಲು ಬ್ಯಾಂಕ್ ಅಧಿಕಾರಿಗಳು ಒಪ್ಪಿದ್ದಾರೆ ಎಂದು ಮುಖ್ಯಮಂತ್ರಿಯವರು ವಿವರಿಸಿದರು.

ವಸತಿ ಸಚಿವ ಎಂ. ಕೃಷ್ಣಪ್ಪ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಟಿಆ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಮತ್ತಿತರರು ಸಭೆಯಲ್ಲಿದ್ದರು.

 


ಒಂದು ಕಮೆಂಟನ್ನು ಬಿಡಿ