ವಜ್ರ ಮಹೋತ್ಸವ: ಶಾಸಕರ ಆಕ್ರೋಶ !


16-10-2017 1061

ಬೆಂಗಳೂರು: ಭಾರೀ ವೆಚ್ಚದಲ್ಲಿ ವಿಧಾನಸೌಧದ ವಜ್ರಮಹೋತ್ಸವ ಆಚರಿಸುವ ವಿಧಾನಮಂಡಲದ ಉಭಯ ಸದನಗಳ ಪೀಠಸೀನಾಧಿಕಾರಿಗಳ ನಿರ್ಧಾರ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ವಜ್ರಮಹೋತ್ಸವ ಅದ್ದೂರಿಯಾಗಿ ನಡೆದು ಉಡುಗೊರೆ ಸ್ವೀಕರಿಸಿದರೆ ಜನ ಥೂ ಎಂದು ನಮ್ಮ ಮುಖಕ್ಕೆ ಉಗುಳುತ್ತಾರೆ ಎಂದು ಶಾಸಕರುಗಳು ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧಕ್ಕೆ ಅರವತ್ತು ವರ್ಷ ಭರ್ತಿಯಾದ ಹಿನ್ನೆಲೆಯಲ್ಲಿ ಇದೇ 25 ಹಾಗೂ 26 ರಂದು ವಜ್ರಮಹೋತ್ಸವ ನಡೆಸಲು ತೀರ್ಮಾನಿಸಿರುವ ಕುರಿತು ಇಂದಿಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಜನಪ್ರತಿನಿಧಿಗಳು, ಇದು ಶಾಸಕರ ಮಾನ-ಮರ್ಯಾದೆ ಕಳೆಯುವ ಯತ್ನ. ಯಾವ ಕಾರಣಕ್ಕೂ ನಮಗೆ ಚಿನ್ನ, ಬೆಳ್ಳಿ ಬೇಡ ಎಂದಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಯೋಜನಾ ಸಚಿವ ಎಂ.ಆರ್.ಸೀತಾರಾಂ, ಇದರ ಅವಶ್ಯಕತೆ ಇರಲಿಲ್ಲ. ಇಂತಹ ಕಾಲಘಟ್ಟದಲ್ಲಿ ನಾವು ಶಾಸಕರಾಗಿದ್ದೆವು ಎಂಬ ನೆನಪಿಗೆ ಸಾಂಕೇತಿಕವಾದ ಮತ್ತು ಸರಳವಾದ ಕೊಡುಗೆ ನೀಡಿದ್ದರೆ ಸಾಕಿತ್ತು ಎಂದರು. ಈಗಾಗಲೇ ನಾವು ಕೇಂದ್ರ ಸರ್ಕಾರದ ನೋಟುಗಳ ಅಮಾನ್ಯೀಕರಣ ಹಾಗೂ ಪ್ರಕೃತಿ ವಿಕೋಪದಿಂದ ತತ್ತರಿಸಿದ್ದೇವೆ. ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ. ಇಂತಹ ಕಾಲದಲ್ಲಿ ವಜ್ರಮಹೋತ್ಸವ ಆಚರಿಸಿ ಚಿನ್ನದ ಕಾಣಿಕೆ ನೀಡುವುದು ಅಗತ್ಯವಿಲ್ಲ ಎಂದರು.

ಕಳೆದ ಸಚಿವ ಸಂಪುಟ ಸಭೆಯಲ್ಲೇ ವಜ್ರ ಮಹೋತ್ಸವ ಆಚರಣೆಯ ಪ್ರಸ್ತಾಪವಾಗಿತ್ತು. ಆದರೆ ಇಷ್ಟು ವೆಚ್ಚ ಮಾಡಲು ಹೊರಟ ಕುರಿತು ಮಾಹಿತಿ ಇರಲಿಲ್ಲ. ಆದರೆ ಈಗ ಮಾಹಿತಿ ದಕ್ಕಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಇದರ ಕುರಿತು ಪ್ರಸ್ತಾಪಿಸಿ ನನ್ನ ಅಭಿಪ್ರಾಯ ಹೇಳುತ್ತೇನೆ ಎಂದರು. ಉಭಯ ಸದನಗಳ ಶಾಸಕರಿಗೆ ಸಾಂಕೇತಿಕವಾಗಿ ನೆನಪಿನ ಕಾಣಿಕೆ ಕೊಡುವುದು ತಪ್ಪಲ್ಲ. ಆದರೆ ನೋಟು ಅಮಾನ್ಯೀಕರಣ ಹಾಗೂ ಜಿಎಸ್‍ಟಿ ತೆರಿಗೆಯಿಂದ ಸರ್ಕಾರದ ಆರ್ಥಿಕ ಶಕ್ತಿ ಕುಗ್ಗಿದೆ. ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಜ್ರಮಹೋತ್ಸವ ಆಚರಿಸಿ, ದುಬಾರಿ ವೆಚ್ಚದಲ್ಲಿ ಚಿನ್ನದ ಉಡುಗೊರೆ ನೀಡುವುದು ಸರಿಯಲ್ಲ. ಜನ ಕಷ್ಟದಲ್ಲಿರುವಾಗ ಇಂತಹ ಕೊಡುಗೆಗಳನ್ನು ಯಾವ ಶಾಸಕರೂ ನಿರೀಕ್ಷಿಸುವುದಿಲ್ಲ ಎಂದು ಹೇಳಿದರು.

ತದ ನಂತರ ಮಾತನಾಡಿದ ವಿಧಾನಪರಿಷತ್ ಉಪಸಭಾಪತಿ ಮರೀತಿಬ್ಬೇಗೌಡ ಮತ್ತು ಹಿರಿಯ ನಾಯಕರಾದ ಬಸವರಾಜ ಹೊರಟ್ಟಿ, ಶ್ರೀಕಂಠೇಗೌಡ, ಪುಟ್ಟಣ್ಣ ಮತ್ತಿತರರು, ವಜ್ರಮಹೋತ್ಸವ ಮಾಡಿ ಚಿನ್ನ ಪಡೆದರೆ ಶಾಸಕರಿಗೆ 'ಜನ ಥೂ ಎಂದು ಉಗುಳುತ್ತಾರೆ' ಎಂದರು.

ಈಗಾಗಲೇ ಬರಗಾಲದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದ್ದಕ್ಕಿದ್ದಂತೆ ಮಳೆ ಜಾಸ್ತಿಯಾಗಿ ಜನ ಸಾಯುತ್ತಿದ್ದಾರೆ. ಆಸ್ತಿ-ಪಾಸ್ತಿ ಹಾನಿಯಾಗುತ್ತಿದೆ. ಹೀಗೆ ಜನರೇ ಸಂಕಷ್ಟದಲ್ಲಿರುವಾಗ ಚಿನ್ನದ ಉಡುಗೊರೆಯನ್ನು ಶಾಸಕರಿಗೆ ನೀಡುವುದು ಸರಿಯೂ ಅಲ್ಲ. ನಮಗೆ ಅದು ಬೇಕೂ ಆಗಿಲ್ಲ ಎಂದರು. ಹೀಗೆ ಜನ ಸಂಕಷ್ಟದಲ್ಲಿರುವಾಗ ಹೀಗೆ ದುಬಾರಿ ಉಡುಗೊರೆ ಪಡೆಯುವುದು ಗೌರವವಲ್ಲ. ಇತಿಹಾಸದಲ್ಲೇ ಇಂತಹ ಘಟನೆ ನಡೆದಿಲ್ಲ ಎಂದು ಶಾಸಕರು ತೀವ್ರ ಆಘಾತ ವ್ಯಕ್ತಪಡಿಸಿದರು.

ವಿಧಾನಸೌಧಕ್ಕೆ ಅರವತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ವಜ್ರಮಹೋತ್ಸವ ಆಚರಿಸಲಿ. ಹಾಗೆಯೇ ಅದನ್ನು ಸರಳವಾಗಿ ಆಚರಿಸಲಿ. ಸಾಂಕೇತಿಕವಾಗಿ ಅದರ ಮಹತ್ವ ನಾಡಿಗೆ ತಿಳಿಸುವ ಕೆಲಸವಾಗಲಿ. ಚಿನ್ನ,ಬೆಳ್ಳಿಯ ಉಡುಗೊರೆ ನೀಡುವುದಲ್ಲ ಎಂದರು.

ಇವತ್ತಿನ ಬೆಳವಣಿಗೆ ನೋಡಿದರೆ ಇದು ಶಾಸಕರ ಮಾನ-ಮರ್ಯಾದೆ ಕಳೆಯುವ ಯತ್ನ ಎಂದು ಟೀಕಿಸಿದ ಅವರು, ಯಾವ ಕಾರಣಕ್ಕೂ ಇದು ನಡೆಯಕೂಡದು. ನಾವ್ಯಾರೂ ಇಂತಹ ಉಡುಗೊರೆಯನ್ನು ಬಯಸಿಯೂ ಇಲ್ಲ. ಪಡೆಯುವುದೂ ಇಲ್ಲ ಎಂದರು.


ಒಂದು ಕಮೆಂಟನ್ನು ಬಿಡಿ