ಮೌಢ್ಯ ನಿಷೇಧಕ್ಕೆ ಸಿದ್ಧತೆ !


26-09-2017 1367

ಬೆಂಗಳೂರು: ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಕಾನೂನು ಇಲಾಖೆ ಸಮ್ಮತಿ ಸೂಚಿಸಿದ್ದು, ಬಹು ನಿರೀಕ್ಷಿತ ಕಾಯ್ದೆ ಜಾರಿಗೆ ಕಾನೂನು ತೊಡಕು ನಿವಾರಣೆಯಾಗಿದೆ.

ರಾಜ್ಯದಲ್ಲಿ ಮೌಢ್ಯ ನಿಷೇಧ ಮಾಡಬೇಕು ಎಂದು ಧಾರ್ಮಿಕ ಮುಖಂಡರು ಸಾಮಾಜಿಕ ಕಾರ್ಯಕರ್ತರು ಹಿರಿಯ ನ್ಯಾಯವಾದಿಗಳು ಹಾಗೂ ನ್ಯಾಯಾಧೀಶರೊಗೊಂಡಂತೆ ಅನೇಕ ಮುಖಂಡರು ನೀಡಿರುವ ಸಲಹೆ ಆಧಾರದ ಮೇಲೆ ಕಂದಾಯ ಇಲಾಖೆ ಕರಡು ಮಸೂದೆ ಸಿದ್ಧಪಡಿಸಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟಕ್ಕೆ ತರುವ ಮುನ್ನ ಕಾನೂನು ಇಲಾಖೆ ಪರಾಮರ್ಶೆ ಮಾಡಬೇಕು ಎಂದು ಕಂದಾಯ ಇಲಾಖೆ ಕಳುಹಿಸಿರುವ ಪ್ರಸ್ತಾವನೆಯನ್ನು 150ಕ್ಕೂ ಹೆಚ್ಚು ಧಾರ್ಮಿಕ ಮುಖಂಡರ ಹಾಗೂ ನಿವೃತ್ತ ನ್ಯಾಯಮೂರ್ತಿಗಳು ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕರ್ತರು ಮೌಢ್ಯ ನಿಷೇಧ ಬಗ್ಗೆ ಮಾಡಿರುವ ವ್ಯಾಖ್ಯಾನವನ್ನು ಪರಾಮರ್ಶೆ ಮಾಡಿದ್ದಾರೆ. ಇದರ  ಅನ್ವಯ ಕಾನೂನು ತರಲು ಸಚಿವಾಲಯ ಸಚಿವ ಸಂಪುಟಕ್ಕೆ ಶಿಫಾರಸ್ಸು ಮಾಡಿತ್ತು ಎಂದು ಅವರು ಹೇಳಿದರು.

ಮೌಢ್ಯ ನಿಷೇಧ ಕಾನೂನು ಕುರಿತಂತೆ ಸಚಿವ ಸಂಪುಟದಲ್ಲಿ ಪರಾಮರ್ಶಿಸಿದ ಬಳಿಕ ಬದಲಾವಣೆ ಮಾಡಬೇಕೆ ಅಥವಾ ಸಾರ್ವಜನಿಕರಿಂದ ಪುನಃ ಸಲಹೆ ಸೂಚನೆಯನ್ನು ಪಡೆಯಬಹುದೇ ಎಂಬ ಬಗ್ಗೆಯೂ ಸಂಪುಟ ಸಭೆ ಅಂತಿಮವಾಗಿ ತೀರ್ಮಾನ ಕೈಗೊಳ್ಳಲಿದೆ ಎಂದು ಜಯಚಂದ್ರ ವಿವರಣೆ ನೀಡಿದರು.

ವಿಧಾನಸೌಧದ ವಜ್ರಮಹೋತ್ಸವ ಅಕ್ಟೋಬರ್ 6 ಮತ್ತು 7 ರಂದು ದಿನಾಂಕ ನಿಗದಿ ಮಾಡಲಾಗಿತ್ತು. ರಾಷ್ಟ್ರಪತಿಯವರು ಸಮಯ ಅವಕಾಶ ನೀಡದೇ ಇರುವುದರಿಂದ ವಜ್ರಮಹೋತ್ಸ ಕಾರ್ಯಕ್ರಮ ತಾತ್ಕಾಲಿಕವಾಗಿ ರದ್ದಾಗಿದೆ ಎಂದು ಅವರು ತಿಳಿಸಿದರು.

ಮುಂದಿನ ದಿನಾಂಕ ನಿಗದಿ ಕುರಿತಂತೆ ಮುಖ್ಯಮಂತ್ರಿ, ಉಭಯ ಸದನಗಳ ಪೀಠಾಸೀನ ಅಧಿಕಾರಿ ಹಾಗೂ ಕಾನೂನು ಸಚಿವರೊಳಗೊಂಡಂತೆ ಉನ್ನತ ಮಟ್ಟದ ಸಮಿತಿ ಪರಿಶೀಲಿಸಿ, ದಿನಾಂಕ ನಿಗದಿ ಮಾಡಲಿದೆ ಎಂದರು.

 

 


ಒಂದು ಕಮೆಂಟನ್ನು ಬಿಡಿ