ಕಳ್ಳರ ಮೇಲೆ ಶೂಟ್: ಅರೆಸ್ಟ್


22-09-2017 1129

ಬೆಂಗಳೂರು: ಅಂಗಡಿಗಳ ಶೆಟರ್ ಮುರಿದು ಕಳ್ಳತನ ಮಾಡುತ್ತಿದ್ದ ಕಳ್ಳರ ಮೇಲೆ ಪೊಲೀಸರು ಗುಂಡು ಹಾರಿಸಿ, ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸಿದ್ದಾರೆ.

ಕಳ್ಳರಾದ ಅಶೋಕ್ (25) ಮತ್ತು ನಾರಾಯಣ ಸ್ವಾಮಿ (32), ಪೊಲೀಸರಿಂದ ಗುಂಡೇಟು ತಿಂದು ಸಿಕ್ಕಿಬಿದ್ದಿರುವ ಖತರ್ನಾಕ್ ಕಳ್ಳರು. ಗುರುವಾರ ರಾತ್ರಿ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೆಡಿಕಲ್ಸ್ ಸ್ಟೋರ್ ಬಾಗಿಲು ಮುರಿದು ಕಳ್ಳತನ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ವಿದ್ಯಾರಣ್ಯಪುರ ಪೊಲೀಸ್ ಇನ್ಸ್ ಪೆಕ್ಟರ್ ಪುನೀತ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದಾಗ ಬಂಧಿತರು ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆಗ ಪೊಲೀಸರು ಆತ್ಮರಕ್ಷಣೆಗಾಗಿ ಕಳ್ಳರ ಕಾಲಿಗೆ ಗುಂಡಿಕ್ಕಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಶಿವಕುಮಾರ್ ಹೇಳಿದರು.

ಕಳ್ಳರನ್ನು ಹಿಡಿಯಲು ಮುಂದಾದಾಗ ಸಬ್ ಇನ್ಸ್ ಪೆಕ್ಟರ್ ಅಣ್ಣಯ್ಯ ಅವರಿಗೆ, ಕಳ್ಳರು ಚಾಕುವಿನಿಂದ ಇರಿದಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಕಳ್ಳರು ಚಾಕುವಿನಿಂದ ಸಬ್ ಇನ್ಸ್ ಪೆಕ್ಟರ್ ಅವರಿಗೆ ಇರಿದಾಗ ತಕ್ಷಣವೇ ಇನ್ಸ್ ಪೆಕ್ಟರ್ ಪುನೀತ್, ಕಳ್ಳರ ಕಾಲಿಗೆ ಗುಂಡು ಹೊಡೆದು ಇಬ್ಬರನ್ನು ಹಿಡಿದಿದ್ದಾರೆ. ಆತ್ಮ ರಕ್ಷಣೆಗಾಗಿ ಕಳ್ಳರಿಗೆ ಗುಂಡು ಹಾರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಗಾಯಗೊಂಡಿರುವ ಸಬ್‍ ಇನ್ಸ್ ಪೆಕ್ಟರ್ ಅಣ್ಣಯ್ಯ ಅವರಿಗೆ ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ