ಅರಣ್ಯ ಭವನದಲ್ಲಿ: ಹುತಾತ್ಮರ ದಿನಾಚರಣೆ !


11-09-2017 1510

ಬೆಂಗಳೂರು: ರಾಜ್ಯದ ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸುವ ವೇಳೆ ನಡೆದ ಅವಘಡಗಳಲ್ಲಿ, ಹುತಾತ್ಮರಾದ ಅರಣ್ಯ ಸಿಬ್ಬಂದಿ ಮಕ್ಕಳಿಗೆ ಪ್ರಸಕ್ತ ಸಾಲಿನಿಂದ "ವಿದ್ಯಾರ್ಥಿ ವೇತನ" ನೀಡಲು ರಾಜ್ಯ ಸರಕಾರ ಮುಂದಾಗಿದೆ.

ನಗರದ ಮಲ್ಲೇಶ್ವರಂ ನ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ಹಾಗೂ ಇಲಾಖೆಯ ಹುತಾತ್ಮರ ದಿನಾಚರಣೆ ಸಮಿತಿ, ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ನಾಡಿನ ಅರಣ್ಯ ಇಲಾಖೆಯ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿ, ಮಾತನಾಡಿದ ಅರಣ್ಯ ಇಲಾಖೆ ಸಚಿವ ರಮಾನಾಥ ರೈ ಈ ವಿಷಯ ತಿಳಿಸಿದರು. ನಾಡಿನ ಅರಣ್ಯ ರಕ್ಷಣೆ ಮಾಡುವಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಹುತಾತ್ಮರ ಮಕ್ಕಳಿಗೆ ಪ್ರೌಢಶಾಲಾಯಿಂದ ಉನ್ನತ ಶಿಕ್ಷಣದವರೆಗೂ ಪ್ರಸ್ತುತ ಸಾಲಿನಿಂದ ವಿದ್ಯಾರ್ಥಿ ವೇತನ ನೀಡಲಾಗುವುದು. ಇದರಿಂದ ಅವರ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂದರು.

ಈ ಸಂಬಂಧ ರಾಜ್ಯ ಅರಣ್ಯ ಇಲಾಖೆ ಹುತಾತ್ಮರ ದಿನಾಚರಣೆ ಸಮಿತಿ 20 ಲಕ್ಷ ರೂಪಾಯಿ ದೇಣಿಗೆ ಸಂಗ್ರಹ ಮಾಡಿದ್ದು, ಇದರ ಜೊತೆಗೆ ಸರ್ಕಾರದ ಹಣವೂ ಸೇರಿಸಿ ಇದೇ ಸಾಲಿನಿಂದ ವಿದ್ಯಾರ್ಥಿಗಳಿಗೆ ವೇತನ ನೀಡಲಾಗುವುದೆಂದು ಸ್ಪಷ್ಟಪಡಿಸಿದರು.

ಹುತಾತ್ಮ ಐಎಫ್‍ಎಸ್ ಅಧಿಕಾರಿ ಪಿ.ಶ್ರೀನಿವಾಸ್ ಹಾಗೂ ಸಿಬ್ಬಂದಿಗಳ ಕುರಿತ "ಕಾನನ ಸೇನಾನಿಗಳು" ಚಿತ್ರದ ಧ್ವನಿಮುದ್ರಣ ತಯಾರಾಗಿದ್ದು, ಶೀಘ್ರದಲ್ಲೇ ವಿಡಿಯೋ ಸಿಡಿ ಬಿಡುಗಡೆ ಮಾಡಲಾಗುವುದು. ಅಲ್ಲದೆ, ಐವತ್ತು ಲಕ್ಷ ರೂ.ನೆರವಿಗಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಅರಣ್ಯ ನಮ್ಮ ನೈಸರ್ಗಿಕ ಸಂಪತ್ತು. ಅದನ್ನು ಉಳಿಸಿಕೊಂಡು ಹೋಗಲು ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕಿದೆ. ಅರಣ್ಯದ ಹಾಗೂ ವನ್ಯ ಜೀವಿಗಳ ರಕ್ಷಣೆಗಾಗಿ ತಮ್ಮ ಬದುಕನ್ನು ತ್ಯಾಗ ಮಾಡಿದವರ ಸ್ಮರಣೆ ಅಗತ್ಯ. ವಿನಾಶದಂಚಿನಲ್ಲಿರುವ ವನ್ಯಜೀವಿ ಹಾಗೂ ಪರಿಸರವನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

ಸೆ.11ರಂದು ಜೋಧಪುರ್‍ ನ ಮಹಾರಾಜ ಅಭಯ ಸಿಂಗ್‍ನ ಸೈನಿಕರು ಹೊಸ ಅರಮನೆಗೆ ಅವಶ್ಯವಿದ್ದ ಕೇರ್ಜಲಿ ಮರಗಳನ್ನು ಕಡಿಯಲು ವಿರೋಧಿಸಿದ ಬಿಷ್ಣೋಯಿ ಸಮುದಾಯದ 363 ಪುರುಷ, ಮಹಿಳೆ ಹಾಗೂ ಮಕ್ಕಳನ್ನು ಕೊಂದರು. ಮರಗಳ ಸಂರಕ್ಷಣೆಗಾಗಿ ಬಲಿದಾನ ಗೈದ ಬಿಷ್ಣೋಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರಕಾರ  ಈ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಆಚರಿಸುತ್ತಿದೆ. ಭಾರತೀಯ ಅರಣ್ಯ ಸೇವೆಯ ಉಪ ಅರಣ್ಯ ಸಂರಕ್ಷಣಾಕಾರಿಯಾಗಿದ್ದ ದಿ.ಶ್ರೀನಿವಾಸ್ ಅವರು ದಂತ ಚೋರ ವೀರಪ್ಪನ್‍ ನಿಂದ ಮರಣ ಹೊಂದಿದ ದಿನವನ್ನು 21 ವರ್ಷಗಳಿಂದ ಅರಣ್ಯ ಇಲಾಖೆ ಹುತಾತ್ಮರ ದಿನವೆಂದು ಆಚರಣೆ ಮಾಡಿಕೊಂಡು ಬರುತ್ತಿದೆ. ಕೇಂದ್ರ ಸರ್ಕಾರ ಇವರ ಕಾರ್ಯದಕ್ಷತೆ ಮೆಚ್ಚಿ "ಕೀರ್ತಿ ಚಕ್ರ" ಶೌರ್ಯ ಪ್ರಶಸ್ತಿ ಪ್ರದಾನಿಸಿದೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್,ಅಪರ  ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಮೂರ್ತಿ, ಅರಣ್ಯ ಪಡೆ ಮುಖ್ಯಸ್ಥ ಕೆ.ಎಸ್.ಸುಗಾರ, ಕೆಎಸ್‍ಆರ್.ಪಿ ಎಡಿಜಿಪಿ ಭಾಸ್ಕರ್ ರಾವ್ ಸೇರಿ ಪ್ರಮುಖರು ಹಾಜರಿದ್ದರು.


ಒಂದು ಕಮೆಂಟನ್ನು ಬಿಡಿ