ಕೆಪಿಸಿಸಿ ಕಾರ್ಯದರ್ಶಿ ಮನೆ ಮೇಲೆ ಐಟಿ ದಾಳಿ !


30-08-2017 1339

ಬೆಂಗಳೂರು: ಕೆಪಿಸಿಸಿ ಕಾರ್ಯದರ್ಶಿ ವಿಜಯ್ ಮುಳಗುಂದ್ ಅವರ ನಿವಾಸದ ಮೆಲೆ ಮೇಲೆ ಐಟಿ ಅಧಿಕಾರಿಗಳಿ ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರ ನಿವಾಸಗಳ ಮೇಲೆ ಐಟಿ ದಾಳಿ ಮುಂದುವರಿದಿದ್ದು, ಇಂಧನ ಸಚಿವ ಡಿಕೆಶಿ ಆಪ್ತ, ಕೆಪಿಸಿಸಿ ಕಾರ್ಯದರ್ಶಿ ವಿಜಯ್ ಮುಳಗುಂದ್ ಅವರ ನಿವಾಸದ ಮೇಲೆ ಇಂದು ಐಟಿ ದಾಳಿ ನಡೆದಿದೆ. ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು, ಈ ಬೆಳವಣಿಗೆ ಕೈ ಪಾಳೆಯವನ್ನು ಆತಂಕಕ್ಕೆ ದೂಡಿದೆ. ಇತ್ತೀಚೆಗೆ ದೇಶಾದ್ಯಂತ ಎಲ್ಲರ ಕುತೂಹಲ ಕೆರಳಿಸಿದ್ದ ಗುಜರಾತ್ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕಕ್ಕೆ ಆಗಮಿಸಿದ್ದ ಗುಜರಾತ್ ಕಾಂಗ್ರೆಸ್ ನ ಶಾಸಕರ ಆತಿಥ್ಯವನ್ನು ಡಿಕೆಶಿ ಅವರಂತೆ ವಿಜಯ್ ಮುಳಗುಂದ್ ಕೂಡಾ ಮಾಡಿದ್ದರು. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಕಾವೇರಿ ಹ್ಯಾಂಡ್ ಲೂಮ್ ಅಧ್ಯಕ್ಷರಾಗಿದ್ದ ವಿಜಯ್ ಮುಳಗುಂದ್ ಇದೀಗ ಐಟಿ ದಾಳಿಗೆ ಗುರಿಯಾಗಿರುವುದು ಕುತೂಹಲ ಕೆರಳಿಸಿದೆ. ಇಂದು ಬೆಳಿಗ್ಗೆ ದಾಳಿ ಆರಂಭವಾಗಿದ್ದು ಇನ್ನೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

ಸಚಿವ ಡಿ.ಕೆ.ಶಿವಕುಮಾರ್ ಆಪ್ತ ವಿಜಯ್ ಮುಳಗುಂದ ನಿವಾಸದ ಮೇಲೆ ಐಟಿ ದಾಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ. ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸುತ್ತಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದರು. ವಿಧಾನಸಭಾ ಚುನಾವಣೆಗೂ ಮುನ್ನಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಆತ್ಮಸ್ತೈರ್ಯ ಕುಗ್ಗಿಸಲು ಈ ರೀತಿ ಐಟಿ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ