ಮಾರಾಟದ ಶಂಕೆ: ಶಿಶುಗಳ ರಕ್ಷಣೆ !


29-08-2017 847

ಕಲಬುರಗಿ: ಕಲಬುರಗಿ ಚೈಲ್ಡ್ ಲೈನ್ ಸಿಬ್ಬಂದಿಗಳಿಂದ ಎರಡು ನವಜಾತ ಶಿಶುಗಳ ರಕ್ಷಣೆ ಮಾಡಲಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಭಂಕೂರ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ನಸ್೯ ಮನೆಯಲ್ಲಿ ಶಿಶುಗಳ ಪತ್ತೆಯಾಗಿದ್ದು, ಮಕ್ಕಳ ಮಾರಾಟ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಅನಾಮಧೇಯರೊಬ್ಬರು  ಚೈಲ್ಡ್ ಲೈನ್‌ ಗೆ ಕರೆ ಮಾಡಿದ್ದಾರೆ. ಕೂಡಲೆ ಎಚ್ಚೆತ್ತ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಕಾರ್ಯಚರಣೆ ನಡೆಸಿ ಶಿಶುಗಳನ್ನು ರಕ್ಷಿಸಿದ್ದಾರೆ. ಹಲವು ವರ್ಷಗಳಿಂದ ನಸ್೯ಗೆ ಮಕ್ಕಳಾಗದ ಹಿನ್ನಲೆಯಲ್ಲಿ ಶಿಶುಗಳನ್ನು ತಂದಿಟ್ಟುಕೊಂಡಿರುವುದಾಗಿ ನಸ್೯ ಹೇಳಿದ್ದಾರೆ. ಆದರೆ ಅಧಿಕಾರಿಗಳ ವಿಚಾರಣೆ ವೇಳೆ ನಸ್೯ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಒಮ್ಮೆ ಬೀದರ್‌ ನಿಂದ, ಮತ್ತೊಮ್ಮೆ ವಿಜಯಪುರದಿಂದ ಶಿಶುಗಳನ್ನ ತಂದಿರುವುದಾಗಿ ಹೇಳಿದ್ದಾರೆ. ನಸ್೯ನ ತದ್ವಿರುದ್ಧ ಹೇಳಿಕೆಯಿಂದ ಅಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದ್ದು, ಗಡಿ ಜಿಲ್ಲೆಗಳಲ್ಲಿ ಮಕ್ಕಳ ಮಾರಾಟ ಶಂಕೆ ಹಿನ್ನಲೆಯಲ್ಲಿ‌, ಶಿಶುಗಳನ್ನು ಕಲಬುರಗಿಯ ಅಮುಲ್ಯ ಶಿಶುಗೃಹಕ್ಕೆ ಹಸ್ತಾಂತರಿಸಿದ್ದಾರೆ. ಈ ಕುರಿತು ದೂರು ದಾಖಲಾಗದಿದ್ದರೂ ಸಹ ಪೊಲೀಸರು ತನಿಖೆ ನಡೆಸುವ ಸಾಧ್ಯತೆಗಳಿವೆ. ಶಹಬಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಒಂದು ಕಮೆಂಟನ್ನು ಬಿಡಿ