ಅಹಮದ್ ‘ಪವರ್‌’ ಪಟೇಲ್


12-08-2017 1423

ಸ್ವತಂತ್ರ ಭಾರತದ ಇತಿಹಾಸದಲ್ಲಿ ರಾಜ್ಯಸಭೆಯ ಒಂದು ಸ್ಥಾನಕ್ಕೆ ಇಂತಹ ಜಿದ್ದಾಜಿದ್ದಿನ ಸೆಣೆಸಾಟ ಹಿಂದೆಂದೂ ನಡೆದಿರಲಿಲ್ಲ. ಗುಜರಾತ್ ರಾಜ್ಯದಿಂದ ರಾಜ್ಯಸಭೆಯ ಮೂರು ಸ್ಥಾನಗಳಿಗಾಗಿ ಮೊನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಕಾಂಗ್ರೆಸ್ ಪಕ್ಷದ ಅಹಮದ್ ಪಟೇಲ್ ಆಯ್ಕೆಯಾದರು.

ಶತಾಯಗತಾಯ ಅಹಮದ್ ಪಟೇಲ್ ಅವರನ್ನು ಸೋಲಿಸಲೇಬೇಕು ಎಂದು ಬಿಜೆಪಿಯವರು ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾದವು. ಅಹಮದ್ ಪಟೇಲ್ ಐದನೇ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾದರು.

ಬಿಜೆಪಿಯ ತಂತ್ರಗಾರಿಕೆಗೆ ಬೆದರಿ, ಗುಜರಾತ್‌ ರಾಜ್ಯದ ಕಾಂಗ್ರೆಸ್ ಪಕ್ಷದ ಶಾಸಕರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು, ರೆಸಾರ್ಟ್‌ನಲ್ಲಿ ಇರಿಸಿದ್ದೂ ಸೇರಿದಂತೆ, ಗುಜರಾತ್ ರಾಜ್ಯಸಭಾ ಚುನಾವಣೆಗೆ ಮುನ್ನ ಏನೆಲ್ಲಾ ಆಯಿತು ಅನ್ನುವುದು ನಿಮಗೆ ಗೊತ್ತು. ಒಟ್ಟಿನಲ್ಲಿ, ಅಹಮದ್ ಪಟೇಲ್ ಅವರನ್ನು ಪರಾಭವಗೊಳಿಸಲು ಬಿಜೆಪಿ ಏನೆಲ್ಲಾ ತಂತ್ರಗಾರಿಕೆ ಮಾಡಿದರೂ ಕಡೆಗೆ ಸಫಲವಾಗಲಿಲ್ಲ.

ಇಷ್ಟಕ್ಕೂ ಬಿಜೆಪಿಯವರು ಹೇಗಾದರೂ ಮಾಡಿ ಸೋಲಿಸಲೇಬೇಕೆಂದು ಹೊರಟಿದ್ದ ಈ ಅಹಮದ್ ಪಟೇಲ್ ಯಾರು? ಕಾಂಗ್ರೆಸ್ ಪಕ್ಷದಲ್ಲಿ ಅವರ ಸ್ಥಾನಮಾನಗಳೇನು? ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಯವರು ಅಹಮದ್ ಪಟೇಲ್‌ ಗೆ ಎಷ್ಟೆಲ್ಲಾ ಮಹತ್ವ ಕೊಡುತ್ತಾರೆ? ಎಂಬ ವಿಚಾರಗಳ ಬಗ್ಗೆ ಸ್ಪೆಷಲ್ ರಿಪೋರ್ಟರ್‌ನಿಂದ ಒಂದು ವಿಶೇಷ ವರದಿ.

ಅಹಮದ್ ಪಟೇಲ್ ಹುಟ್ಟಿದ್ದು 1949ರ ಆಗಸ್ಟ್ ತಿಂಗಳ 21ರಂದು. ಗುಜರಾತ್ ರಾಜ್ಯದ ಅಂಕ್ಲೇಶ್ವರ ಜಿಲ್ಲೆಯ ಭರೂಚ್, ಅಹಮದ್ ಪಟೇಲ್ ಹುಟ್ಟೂರು. ತಂದೆ ಮಹಮದ್ ಇಷಾಕ್ ಜಿ ಪಟೇಲ್, ತಾಯಿ ಹಾವಾಬೆನ್ ಪಟೇಲ್.  ಭರೂಚ್‌ ನ ಶ್ರೀ ಜಯೇಂದ್ರ ಪುರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದ ಅಹಮದ್ ಪಟೇಲ್ ಅವರ ಅಧಿಕೃತ ವೃತ್ತಿ, ವ್ಯವಸಾಯವಂತೆ.

ಸಮಾಜ ಸೇವೆ ಮಾಡುತ್ತಿದ್ದ ತಂದೆಯ ಮಗನಾದ ಅಹಮದ್ ಪಟೇಲ್, ರಾಜಕಾರಣದಲ್ಲಿ ಗಾಡ್ ಫಾದರ್ ಇಲ್ಲದೆಯೇ ಮೇಲೆ ಬಂದವರು. ವಿದ್ಯಾರ್ಥಿ ದೆಸೆಯಲ್ಲೇ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಅಹಮದ್ ಪಟೇಲ್. ಗುಜರಾತ್ ಯುವ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದರು. ಇಂದಿರಾ ಗಾಂಧಿಯವರ ಸೂಚನೆ ಮೇರೆಗೆ 1977ರಲ್ಲಿ ಭರೂಚ್‌ ಕ್ಷೇತ್ರದಿಂದ ಕಣಕ್ಕಿಳಿದ ಅಹಮದ್ ಪಟೇಲ್, ಮೊದಲ ಪ್ರಯತ್ನದಲ್ಲೇ ಲೋಕಸಭೆಗೆ ಆಯ್ಕೆಯಾದರು.

ಆಗ ಅಹಮದ್ ಪಟೇಲ್‌ ವಯಸ್ಸು ಕೇವಲ 28 ವರ್ಷ. ಆನಂತರ 1980 ಮತ್ತು 1984ರಲ್ಲಿ ಮತ್ತೆ ಲೋಕಸಭೆಗೆ ಆಯ್ಕೆಯಾದ ಅಹಮದ್ ಪಟೇಲ್, ಹ್ಯಾಟ್ರಿಕ್ ಸಾಧಿಸಿದ್ದರು.

ಆದರೆ, ಎಂಬತ್ತರ ದಶಕದ ಕೊನೆಗೆ, ಗುಜರಾತ್‌ನಲ್ಲಿ ಬಿಜೆಪಿ ಅಲೆ ಹೆಚ್ಚಾಗಿತ್ತು. ಅದರ ಪರಿಣಾಮವಾಗಿ, 1990ರ ಲೋಕಸಭೆ ಚುನಾವಣೆಯಲ್ಲಿ ಅಹಮದ್ ಪಟೇಲ್ ಸೋಲನುಭವಿಸಿದರು. ಆ ಬಳಿಕ 1993ರಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ ಅಹಮದ್ ಪಟೇಲ್, ನಂತರ 1999, 2005, 2011 ಮತ್ತು ಇದೀಗ ಐದನೇ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿರುವುದೂ ಸೇರಿದಂತೆ ಈವರೆಗೆ ಒಟ್ಟು ಎಂಟು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಪಕ್ಷದ  ಸಂಸದೀಯ ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ ಹಣಕಾಸು ನಿರ್ವಹಣೆ ಜವಾಬ್ದಾರಿ ನಿಭಾಯಿಸಿರುವ ಅಹಮದ್ ಪಟೇಲ್, ಗುಜರಾತ್ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದರು.

ಕಾಂಗ್ರೆಸ್ ಪಕ್ಷದ trouble-shooter ಅಂದರೆ, ತೊಂದರೆ ನಿವಾರಕ ಎಂದು ಹೆಸರಾಗಿರುವ ಅಹಮದ್ ಪಟೇಲ್, ಆ ಪಕ್ಷದ ಪ್ರಧಾನ ತಂತ್ರಜ್ಞ,  ಅಂದರೆ, ಪಕ್ಷದ ಪರವಾಗಿ ತಂತ್ರಗಾರಿಕೆ ರೂಪಿಸುವ ವ್ಯಕ್ತಿ ಎಂದು ಅರ್ಥೈಸಿಕೊಳ್ಳಿ.

ಅತಿ ಹೆಚ್ಚುಸಮಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವ ಹೆಗ್ಗಳಿಕೆಗೆ ಪಾತ್ರರಾಗಿರುವ ಅಹಮದ್ ಪಟೇಲ್, ಇವತ್ತಿನ ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಬಲ ಮುಖಂಡರಲ್ಲಿ ಒಬ್ಬರು.

ಅಹಮದ್ ಪಟೇಲ್, ನೆಹರು-ಗಾಂಧಿ ಕುಟುಂಬಕ್ಕೆ ನಿಷ್ಠಾವಂತರಾಗಿರುವ ನಾಯಕ. ಸದಾಕಾಲ ಪಕ್ಷ ಸಂಘಟನೆ ಬಗ್ಗೆ ಚಿಂತಿಸುವ ಅಹಮದ್ ಪಟೇಲ್, ಮನಸ್ಸು ಮಾಡಿದ್ದರೆ, ಇಲ್ಲಿಯವರೆಗೆ ಸಾಕಷ್ಟು ವರ್ಷಗಳ ಕಾಲ, ಕೇಂದ್ರ ಸಚಿವರಾಗಿ ಅಧಿಕಾರ ಅನುಭವಿಸಬಹುದಿತ್ತು.

ಕಾಂಗ್ರೆಸ್ ಪಕ್ಷದ ಆಡಳಿದ ಅವಧಿಯಲ್ಲಿ ನಾಲ್ವರು ಪ್ರಧಾನಿಗಳು, ಅಹಮದ್ ಪಟೇಲ್ ಅವರನ್ನು ಸಂಪುಟ ಸೇರುವಂತೆ ಆಹ್ವಾನಿಸಿದ್ದರು, ಆದರೆ, ಇವರೇ ಮನಸ್ಸು ಮಾಡಲಿಲ್ಲ ಅನ್ನುವುದು, ಪಕ್ಷದ ಒಳಗಿನವರು ಹೇಳುವ ಮಾತು.

68 ವರ್ಷದ ಈ ನಾಯಕನಿಗೆ ಈ ಬಾರಿ ರಾಜ್ಯಸಭೆ ಪ್ರವೇಶಿಸುವುದು ಅತ್ಯಂತ ಪ್ರಾಯಾಸದಾಯಕವಾಗಿತ್ತು ಅನ್ನುವುದಂತೂ ನಿಜ. ನಿಯಮಗಳ ಉಲ್ಲಂಘನೆ ಕಾರಣಕ್ಕಾಗಿ ಚುನಾವಣಾ ಆಯೋಗದವರು, ಇಬ್ಬರು ಭಿನ್ನಮತೀಯ ಕಾಂಗ್ರೆಸ್ ಶಾಸಕರ ಮತಗಳನ್ನು ತಿರಸ್ಕರಿಸಿದ್ದರ ಫಲವಾಗಿ, ಅಹಮದ್ ಪಟೇಲ್ ಗೆಲುವು ಸಾಧ್ಯವಾಯಿತು.

ಇಲ್ಲವಾಗಿದ್ದಲ್ಲಿ ಅಹಮದ್ ಪಟೇಲ್ ಆಯ್ಕೆ ಸಾಧ್ಯವಿರಲಿಲ್ಲ. ಈ ಗೆಲುವು ನನ್ನ ಗೆಲುವು ಮಾತ್ರವಲ್ಲ, ಇದು ಹಣ ಬಲ, ತೋಳ್ಬಲ ಮತ್ತು ಅಧಿಕಾರ ಬಲಗಳ ವಿರುದ್ಧ ದೊರೆತ ಗೆಲುವು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೇಳುವಂತೆ, ಗುಜರಾತ್ ಕಾಂಗ್ರೆಸ್‌ ನಲ್ಲಿ ಅಹಮದ್ ಪಟೇಲ್ ಇಶಾರೆ ಇಲ್ಲದೆ, ಒಂದು ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲವಂತೆ. ಗುಜರಾತ್ ಕಾಂಗ್ರೆಸ್ ಅಧ್ಯಕ್ಷರು ಯಾರಾಗಬೇಕು, ನಗರಗಳಲ್ಲಿನ ಮೇಯರ್ ಚುನಾವಣೆಯಲ್ಲಿ ಯಾರು ಸ್ಪರ್ಧಿಸಬೇಕು ಅನ್ನುವ ವಿಚಾರದಲ್ಲೂ ಅಂತಿಮ ಮಾತು ಅಹಮದ್ ಪಟೇಲ್ ಅವರದ್ದೇ ಆಗಿರುತ್ತದಂತೆ.

ಹೆಚ್ಚು ಸದ್ದುಮಾಡಲು ಬಯಸದ ಅಹಮದ್ ಪಟೇಲ್ ಅವರ ಮಾತು ಮೃದುವಾದರೂ ಕೂಡ, ವಿಚಾರದಲ್ಲಿ ಸ್ಪಷ್ಟತೆ ಇರುತ್ತದೆ. 2004ರ ಲೋಕಸಭಾ ಚುನಾವಣೆ ಬಳಿಕ, ತೆರೆಮರೆಯಲ್ಲಿದ್ದುಕೊಂಡೇ ವಿವಿಧ ಪಕ್ಷಗಳ ಜೊತೆ ಹೊಂದಾಣಿಕೆ ಸಾಧಿಸಿ, ಯುಪಿಎ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಇದೇ ಅಹಮದ್ ಪಟೇಲ್.

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಹತ್ತು ವರ್ಷಗಳಲ್ಲಿ, ಡಾ.ಮನ್‌ ಮೋಹನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ್ದ ಮಿತ್ರ ಪಕ್ಷಗಳ ಜೊತೆಗಿನ ಸಂಬಂಧವನ್ನು ನಿಭಾಯಿಸಿ, ಸರ್ಕಾರದ ಸ್ಥಿರತೆ ಕಾಪಾಡಿಕೊಳ್ಳಲು ಕಾರಣವಾಗಿದ್ದೂ ಕೂಡ ಅಹಮದ್ ಪಟೇಲ್.  

ಅಹಮದ್ ಪಟೇಲ್ ಅವರು, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಕರ್ನಾಟಕದ ಹಲವು ಕಾಂಗ್ರೆಸ್ ಮುಖಂಡರ ಜೊತೆ ಒಡನಾಟ ಹೊಂದಿದ್ದಾರೆ.

ಐದನೇ ಬಾರಿ, ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ. ಇನ್ನು ಕೆಲವೇ ದಿನಗಳಲ್ಲಿ ಬರಲಿರುವ ತಮ್ಮ ಹುಟ್ಟಿದ ಹಬ್ಬಕ್ಕೆ ಅಡ್ವಾನ್ಸ್ ಗಿಫ್ಟ್  ಪಡೆದಿರುವ ಅಹಮದ್ ಪಟೇಲ್, ಸದ್ಯದಲ್ಲೇ ಬರಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಸಾಧ್ಯವೇ?  ಅನ್ನುವುದಕ್ಕೆ ಉತ್ತರ ಹೇಳುವುದು ಅಷ್ಟು ಸುಲಭವಲ್ಲ.

 

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

ಅಹಮದ್ ‘ಪವರ್‌’ ಪಟೇಲ್ ! ಪಟೇಲ್ !