ಗುಪ್ತಚರ ಅಧಿಕಾರಿಗಳ ವಿರುದ್ಧ ಸಿಎಂ ಗರಂ !


03-08-2017 697

ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಂಬಂಧಿಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ಮಾಹಿತಿ ಕಲೆ ಹಾಕುವಲ್ಲಿ ವಿಫಲವಾಗಿರುವ ಗುಪ್ತಚರ ವಿಭಾಗದ ಅಧಿಕಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.  ಗುಪ್ತಚರ ವಿಭಾಗದ ಎಡಿಜಿಪಿ ಎ.ಎನ್.ಪ್ರಸಾದ್ ಅವರನ್ನು ತಮ್ಮ ಅಧಿಕೃತ ನಿವಾಸಕ್ಕೆ ಕರೆಸಿಕೊಂಡ ಸಿದ್ದರಾಮಯ್ಯ ಕಟು ಶಬ್ದಗಳಲ್ಲೇ ತರಾಟೆಗೆ ತೆಗೆದುಕೊಂಡರೆಂದು ತಿಳಿದುಬಂದಿದೆ.

ಐಟಿ ಅಧಿಕಾರಿಗಳು ಕಳೆದ 10 ದಿನಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದರ ಬಗ್ಗೆ ನಿಮಗೆ ಮಾಹಿತಿ ಇಲ್ಲ ಎಂದರೆ ನಿಮ್ಮ ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದಾರೆ? ಸಿ.ಆರ್.ಪಿ.ಎಫ್  ಪಡೆ ಬೆಂಗಳೂರಿಗೆ ಬಂದು, ಒಂದು ವಾರವಾಗಿದ್ದರೂ ಅದರ ಬಗ್ಗೆ ಸುಳಿವು ಸಿಕ್ಕಿಲ್ಲ ಎಂದರೆ ಗುಪ್ತಚರ ವಿಭಾಗ ಇದೆಯೇ ಎಂದು ಪ್ರಶ್ನಿಸಿದ್ದಾಗಿ ತಿಳಿದುಬಂದಿದೆ. ಡಿಕೆಶಿ ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್, ಸಂಬಂಧಿಕರು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಮತ್ತಿತರ ಕಡೆ ದಾಳಿ ನಡೆಯಬಹುದೆಂಬ ಮುನ್ಸೂಚನೆ ಇದ್ದರೂ ಕಿಂಚಿತ್ತೂ ಮಾಹಿತಿಯನ್ನು ನಿಮ್ಮ ಅಧಿಕಾರಿಗಳು ಕಲೆ ಹಾಕಿಲ್ಲ. ಬುಧವಾರ ಬೆಳಗ್ಗೆ ಸ್ವತಃ ನಿಮಗೆ 9 ಗಂಟೆವರೆಗೂ ದಾಳಿ ನಡೆದಿರುವ ಬಗ್ಗೆ ಮಾಹಿತಿ ಇರಲಿಲ್ಲ. ನಿಮ್ಮ ಕೆಳಹಂತದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿದೆಯೇ ಎಂದು ಪ್ರಸಾದ್ ಅವರನ್ನು ಸಿಎಂ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ಸ್ಥಳೀಯ ಪೊಲೀಸರ ನೆರವನ್ನೂ ಪಡೆಯದೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದರೆ ಇದು ಕನಿಷ್ಟ ಹತ್ತು ದಿನಗಳ ಹಿಂದೆಯೇ ಪೂರ್ವ ಸಿದ್ದತೆ ಮಾಡಿಕೊಳ್ಳಲಾಗಿದೆ. ಯಾವುದೇ ಮಾಹಿತಿ ನಿಮ್ಮ ಬಳಿ ಇಲ್ಲ ಎಂದರೆ ನಿಮ್ಮ ವಿಭಾಗವನ್ನು ಮುಚ್ಚುವುದೇ ಒಳಿತು ಎಂದು ಹರಿಹಾಯ್ದಿದ್ದಾರೆ. ಮುಖ್ಯಮಂತ್ರಿಗಳ ಕೆಂಗೆಣ್ಣಿಗೆ ಗುರಿಯಾದ ಪ್ರಸಾದ್ ಮರು ಮಾತನಾಡದೆ ಕಾವೇರಿಯಿಂದ ಮೌನವಾಗಿ ನಿರ್ಗಮಿಸಿದರು ಎಂದು ತಿಳಿದುಬಂದಿದೆ.


ಒಂದು ಕಮೆಂಟನ್ನು ಬಿಡಿ