ಚಿನ್ನಾಭರಣ ದೋಚುತ್ತಿದ್ದ ಕಳ್ಳಿ ಬಂಧನ !


26-07-2017 1060

ಬೆಂಗಳೂರು: ಬಸ್ ನಲ್ಲಿ ಪ್ರಯಾಣಿಸುವ ವೃದ್ಧೆಯರು ಮತ್ತು ಮಕ್ಕಳಿಂದ ಚಿನ್ನದ ಒಡವೆಗಳನ್ನು, ಪ್ರಯಾಣಿಕರ ಸೋಗಿನಲ್ಲಿ ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳಿ, ರಾಮನಗರದ, ಗಾಂಧಿಪುರದ ಶಾಂತಮ್ಮ ಅಲಿಯಾಸ್ ಶಾನು (35)ನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಈಕೆ ಇಂದ ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡು ಹೆಚ್ಚಿನ ತನಿಖೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನಗಳವು ಮಾಡುತ್ತಿದ್ದ ಜೆಪಿ ನಗರದ ಇಲಿಯಾಸ್ ನಗರದ ಸೈಯದ್ ಅಪ್ಸರ್ ಅಲಿಯಾಸ್ ಕೋತಾ(26)ನನ್ನು ಬಂಧಿಸಿ 3 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಕೆಎಸ್ ಲೇಔಟ್‍ ನ, ಬ್ಯಾಂಕ್ ಮ್ಯಾನೇಜರ್ ಹೊಂಬಾಳೆ ಗೌಡ ಎಂಬುವರ ಮನೆ ಬೀಗ ಮುರಿದು ಒಳ ನುಗ್ಗಿ ಕಳವು ಮಾಡಿದ್ದು, ಆತನಿಂದ 110 ಗ್ರಾಂ ಚಿನ್ನಾಭರಣ, ಒಂದೂವರೆ ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನು ಗಿರಿ ನಗರ ಪೊಲೀಸರು ಬಿಎಂಟಿಸಿ ಬಸ್‍ನಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಕಳವು ಮಾಡುತ್ತಿದ್ದ ಆರೋಪಿ ಅತ್ತಿಬೆಲೆಯ ಗಿರೀಶ್ ಅಲಿಯಾಸ್ ಪ್ಲಂಬರ್ ರಾಜ (25)ನನ್ನು ಬಂಧಿಸಿ 7 ಲಕ್ಷ ಮೌಲ್ಯದ 335 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಬಸ್ ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಂಚರಿಸುತ್ತ ಪ್ರಯಾಣಿಕರ ಬ್ಯಾಗ್ ನಲ್ಲಿರುವ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ. ಅಲ್ಲದೇ ವೃದ್ಧಾಪ್ಯವೇತನ ಕೊಡಿಸುವುದಾಗಿ ವಂಚನೆ ನಡೆಸುತ್ತಿದ್ದ ಎಂದು ಡಿಸಿಪಿ ಶರಣಪ್ಪ ತಿಳಿಸಿದ್ದಾರೆ. ಆರೋಪಿಯ ಜೊತೆ ಕಳವು ಕೃತ್ಯದಲ್ಲಿ ಭಾಗಿಯಾಗುತ್ತಿದ್ದ ನಾಗರಾಜ್, ಪದ್ಮ ಹಾಗೂ ಮಂಜುಳಾ ತಲೆಮರೆಸಿಕೊಂಡಿದ್ದು ಅವರಿಗಾಗಿ ಶೋಧ ನಡೆಸಲಾಗಿದೆ.


ಒಂದು ಕಮೆಂಟನ್ನು ಬಿಡಿ