ಹಗರಣ ಮರೆಮಾಚಲು ಧ್ವಜ ವಿವಾದ..?


20-07-2017 489

ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ರಾಜ್ಯದ ಜನರ ನಿರೀಕ್ಷೆಯನ್ನ ಹುಸಿ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಅತೀ ಹೆಚ್ಚು ಸಾಲ ಮಾಡಿದ ಅಪಕೀರ್ತಿಗೆ, ಸಿದ್ದರಾಮಯ್ಯ ಭಾಜನರಾಗಿದ್ದಾರೆ ಎಂದರು. ಈವರೆಗೆ ೧.೩೨ ಸಾವಿರ ಕೋಟಿ ಸಾಲ ಮಾಡಿರುವ ರಾಜ್ಯ ಸರ್ಕಾರ, ವಿಭಜನೆ ಮತ್ತು ವಿಷಯಾಂತರದಲ್ಲಿ ತೊಡಗಿದೆ, ಶಾಲಾ ಮಕ್ಕಳಿಂದ ರೈತರವರೆಗೂ ಎಲ್ಲರನ್ನೂ ಸಿದ್ದರಾಮಯ್ಯ ವಿಭಜನೆ ಮಾಡಿದ್ದಾರೆ ಎಂದು ಆರೋಪಿಸಿದರು. ಕಾರಾಗೃಹ ಹಗರಣವನ್ನು ಮರೆಮಾಚಲು ಧ್ವಜದ ವಿವಾದ ಸೃಷ್ಟಿಸಿದ್ದಾರೆ ಎಂದ ಅವರು, ಭ್ರಷ್ಟಾಚಾರ ಬಯಲಿಗೆಳೆದ ಅಧಿಕಾರಿಯನ್ನು ಕೇವಲ ೪೮ ಗಂಟೆಯಲ್ಲಿ ವರ್ಗಾಯಿಸಿ, ಆಡಳಿತ ಯಂತ್ರವನ್ನ ಹತ್ತಿಕ್ಕುವ ಯತ್ನ ನಡೆಸಿರುವುದು, ರಾಜ್ಯದ ಆಡಳಿತ ವ್ಯವಸ್ಥೆ, ಅಧೋಗತಿಗೆ ಹಿಡಿದ ಕನ್ನಡಿ ಎಂದು ವಾಗ್ದಾಳಿ ನಡೆಸಿದರು. ರೈತರ ಸಾಲ ಮನ್ನಾ ವಿಚಾರದಲ್ಲಿ ಸಿಎಂ ಕ್ರಿಮಿನಲ್ ಬುದ್ಧಿ ಉಪಯೋಗಿಸಿದ್ದಾರೆ, ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ ಬೆಲೆ ಮತ್ತು ಬೆಳೆ ನೀತಿ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಹೀಗಾಗಿ ಎರಡನ್ನೂ ಜಾರಿಗೆ ತರುವ ಕೆಲಸ ಏಕಕಾಲಕ್ಕೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ನಮ್ಮ ರೈತರನ್ನು ಆರ್ಥಿಕವಾಗಿ ಸಬಲ ಮಾಡುವ ಉದ್ದೇಶದಿಂದ ಇಸ್ರೇಲ್ ಮಾದರಿಯ ಕೃಷಿ ತಂತ್ರಜ್ಞಾನ ಅಳವಡಿಕೆಗೆ ಪ್ರಯತ್ನಿಸಬೇಕು ಎಂದರು.


ಒಂದು ಕಮೆಂಟನ್ನು ಬಿಡಿ