ಬಿಬಿಎಂಪಿ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ !


17-07-2017 1435

ಬೆಂಗಳೂರು: ನಗರದಲ್ಲಿ ಡೆಂಘಿ ಮತ್ತು ಚಿಕೂನ್ ಗುನ್ಯಾದಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಬಿಬಿಎಂಪಿ ವೈಫಲ್ಯ ಅನುಭವಿಸಿದೆ ಎಂದು, ಬೆಂಗಳೂರು ಜೆಡಿಯು ನಗರ ಘಟಕದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದ ಕಾರ್ಯಕರ್ತರು ಡೆಂಘಿ, ಚಿಕೂನ್ ಗುನ್ಯಾದಿಂದ 30ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂಬುದು ಮಾಧ್ಯಮಗಳಿಂದಲೇ ತಿಳಿದುಬಂದಿದ್ದರೂ, ಯಾವುದೇ ನಿಯಂತ್ರಣ ಮಾಡದೆ ಕೈಕಟ್ಟಿ ಕುಳಿತುಕೊಂಡಿದೆ ಎಂದು ಆರೋಪಿಸಿದರು. ಕಳೆದ ನಾಲ್ಕು ಬಾರಿಯ ಬಜೆಟ್‍ಗಳಲ್ಲಿ ಸೊಳ್ಳೆ ನಿಯಂತ್ರಣಕ್ಕೆ 27 ಕೋಟಿ ಹಣವನ್ನು ತೆಗೆದಿರಿಸಿದ್ದರೂ, ಕೇವಲ 5 ಕೋಟಿಗಳನ್ನಷ್ಟೇ ವೆಚ್ಚ ಮಾಡಿದೆ. ಹಾಗಾಗಿ ಈ ರೋಗವನ್ನು ನಿಯಂತ್ರಿಸುವಲ್ಲಿ ಬಿಬಿಎಂಪಿಗೆ ಸಾಧ್ಯವಾಗಿಲ್ಲ ಎಂದು ಆಪಾದಿಸಿದರು. ವಾರ್ಡ್ ಮಟ್ಟದಲ್ಲಿ ಸಂಪರ್ಕ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿಗಳು, ಈ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವಲ್ಲಿ ಹೆಚ್ಚು ಜವಾಬ್ದಾರರಾಗಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ಕೆ.ಎಂ. ಪಾಲಾಕ್ಷ, ಎನ್. ನಾಗೇಶ್, ರಮೇಶ್, ಜಿ. ಆನಂದ್, ಮತ್ತಿತರರು ಉಪಸ್ಥಿತರಿದ್ದರು.


ಒಂದು ಕಮೆಂಟನ್ನು ಬಿಡಿ