ದೋಖಾ ಕಂಪನಿಗಳ ಆಸ್ತಿ ಮುಟ್ಟುಗೋಲು..?


14-07-2017 485

ಬೆಂಗಳೂರು: ಸಾರ್ವಜನಿಕರಿಂದ ಠೇವಣಿಯಿರಿಸಿಕೊಂಡು ಕೋಟ್ಯಂತರ ರೂಪಾಯಿ ಠೇವಣಿಯನ್ನು ವಂಚಿಸಿರುವ ಖಾಸಗಿ ಹಣಕಾಸು ಸಂಸ್ಥೆಗಳ ವಿರುದ್ದ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಸಾರ್ವಜಿನಕರಿಗೆ ಹೆಚ್ಚಿನ ಬಡ್ಡಿ ಇನ್ನಿತರ ಅಮಿಷವೊಡ್ಡಿ ಠೇವಣಿ ಇರಿಸಿಕೊಂಡು ವಂಚಿಸುವ ಹಣಕಾಸು ಸಂಸ್ಥೆಗಳ ವಿರುದ್ದ ವಿರುದ್ಧ ಸಿಐಡಿ ತನಿಖೆ ಹಾಗೂ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಜನರಿಂದ ಠೇವಣಿಗಳನ್ನು ಕಟ್ಟಿಸಿಕೊಂಡು ವಂಚನೆ ಮಾಡುವ ಪ್ರಕರಣಗಳು ರಾಜ್ಯದಲ್ಲಿ ಆಗಾಗ ಬೆಳಕಿಗೆ ಬರುತ್ತಿವೆ. ಎಷ್ಟೇ ಜಾಗೃತಿ ವಹಿಸಿದ್ದರೂ ಸಾರ್ವಜನಿಕರು ವಂಚನೆಗೆ ಒಳಗಾಗುತ್ತಲೇ ಇದ್ದಾರೆ. ಚೈನ್ ಲಿಂಕ್ ರೀತಿಯಲ್ಲಿ ಸಾರ್ವಜನಿಕರನ್ನು ಕಂಪನಿಗಳು ವಂಚಿಸುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮಕ್ಕೆ ಮುಂದಾಗಿದೆ.

ತುಮಕೂರು ಜಿಲ್ಲೆಯಲ್ಲಿ ಚೈನ್ ಲಿಂಕ್ ಸಂಸ್ಥೆಯೊಂದು ನಡೆಸಿದ್ದ ವಂಚನೆ ಪ್ರಕರಣ ಬೆಳಕಿಗೆ ಬಂದಾಗ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅದನ್ನು ಗಂಭೀರವಾಗಿ ಪರಿಗಣಿಸಿ ಕಂದಾಯ, ಪೊಲೀಸ್ ಅಧಿಕಾರಿಗಳ ಜತೆ ಸತತ ಸಭೆ ನಡೆಸಿ ಸಿಐಡಿ ತನಿಖೆ ನಡೆಸಲು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆ ಪ್ರಕರಣದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇರುವ ಬಗ್ಗೆ ಚರ್ಚೆ ನಡೆಸಿದ ಚರ್ಚೆಯಲ್ಲಿ, ಒಂದಾದ ನಂತರ ಮತ್ತೊಂದು ಎಂಬಂತೆ 8 ಕಂಪನಿಗಳ ವಿರುದ್ಧ ಸರ್ಕಾರಕ್ಕೆ ದೂರುಗಳು ಬಂದಿವೆ. ಹೆಚ್ಚಿನ ಬಡ್ಡಿ ಆಸೆಗೆ ಠೇವಣಿ ಕಟ್ಟಿರುವ ತಾವೇ ಪ್ರತಿನಿಧಿಯಾಗಿ ಬೇರೆ ಬೇರೆಯವರಿಂದ ಠೇವಣಿ ಕಟ್ಟಿಸಿಕೊಂಡಿರುವ ನೂರಾರು ಜನ ಸರ್ಕಾರಕ್ಕೆ ಪ್ರತಿನಿತ್ಯ ದೂರು ಸಲ್ಲಿಸುತ್ತಿದ್ದಾರೆ. ಸರ್ಕಾರ ಕೆಲ ಸಂಸ್ಥೆಗಳಿಗೆ ಠೇವಣಿಯನ್ನು ಗ್ರಾಹಕರಿಗೆ ಹಿಂದಿರುಗಿಸುವಂತೆ ಸಾಕಷ್ಟು ಬಾರಿ ನೋಟಿಸ್ ನೀಡಿದೆ. ಆದರೆ ಸರಿಯಾದ ಉತ್ತರವನ್ನು ನೀಡದಿರುವ ಕಾರಣ ಆಯಾ ಉಪ ವಿಭಾಗಗಳ ಸಹಾಯಕ ಆಯುಕ್ತರ ಮೂಲಕ ಸಂಸ್ಥೆಗಳ ಆಸ್ತಿ ಮುಟ್ಟುಗೋಲಿಗೆ ಮುಂದಾಗಿದೆ. ಈ ಬಗ್ಗೆ ಅಧಿಸೂಚನೆ ಸಹ ಹೊರಡಿಸಿದೆ. ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತರಕ್ಷಣೆ ಕಾಯ್ದೆ 2004 ರ ಅನ್ವಯ ಆಸ್ತಿ ಮುಟ್ಟುಗೋಲಿಗೆ ಅವಕಾಶ ಇರುವುದರಿಂದ ಸರ್ಕಾರ ಅದರಂತೆ ಮುಂದುವರಿಯುತ್ತಿದೆ. ಸಿಐಡಿ ತನಿಖೆ ನಡೆಸಿ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವುದರೊಂದಿಗೆ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹರಾಜು ಮಾಡಿ ಸಾರ್ವಜನಿಕರಿಗೆ ಹಣ ಹಿಂತಿರುಗಿಸಲು ಸರ್ಕಾರ ನಿರ್ಧರಿಸಿದೆ.

ಸರ್ಕಾರಕ್ಕೆ ಆರಂಭದಲ್ಲಿ ಮೈತ್ರಿ ಫ್ಲಾಂಟೇಶನ್ ಸಂಸ್ಥೆ ವಿರುದ್ಧ ದೂರು ಬಂತು. ಅದನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಆ ನಂತರ ಅಗ್ರಿಗೋಲ್ಡ್, ಹಿಂದುಸ್ತಾನ್ ಇಫ್ರಾಕಾನ್ ಲಿಮಿಟೆಡ್, ಖಾಸನೀಸ್, ಮೈತ್ರಿ ರಿಯಲೇಟರ್ಸ್ ಇಂಡಿಯಾ ಪ್ರೈ.ಲಿ., ಶ್ರೀ ನಕ್ಷತ್ರ ಬಿಲ್ಡರ್ ಅಂಡ್ ಡೆವಲಪರ್ ಇಂಡಿಯಾ ಲಿ. ಸೇರಿ ಎಂಟು ಸಂಸ್ಥೆಗಳ ವಿರುದ್ಧ ದೂರುಗಳಿವೆ. ಈ ಎಲ್ಲ ಸಂಸ್ಥೆಗಳ ವಿರುದ್ಧ ದೂರುಗಳನ್ನು ಸಿಐಡಿಗೆ ವಹಿಸಲಾಗಿದೆ. ಎಷ್ಟೇ ಜಾಗೃತಿ ವಹಿಸಿದರೂ ಜನ ಮೋಸ ಹೋಗುವುದು ತಪ್ಪಿಲ್ಲ. ಆದ್ದರಿಂದಲೇ ದೂರು ಬಂದ ಸಂಸ್ಥೆಗಳಿಂದ ಆಸ್ತಿ ಮುಟ್ಟುಗೋಲು ಹಾಗೂ ಸಿಐಡಿ ತನಿಖೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಅಧಿಕಾರಿಗಳ ಜನತೆ 10 ಕ್ಕೂ ಹೆಚ್ಚು ಸಭೆ ನಡೆಸಿದ್ದೇನೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ