ನವಿಲುಗಳಿಂದ ಕಂಗೆಟ್ಟ ರೈತರು !


10-07-2017 384

ಮಡಿಕೇರಿ: ಕೊಡಗಿನಲ್ಲಿ ಹಿಂದಿನಿಂದಲೂ ಭತ್ತ ಮುಖ್ಯ ಬೇಸಾಯವಾಗಿತ್ತು. ಅದರಲ್ಲಿ  ಕಾಲಕ್ರಮೇಣ ಕಾಫಿಯು ತನ್ನ ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದ ಜನರಲ್ಲಿ ಆಸೆಯನ್ನು ಮೂಡಿಸಿ ಉಪ ಬೆಳೆಯಿಂದ ಮುಖ್ಯಬೆಳೆಗೆ ಪ್ರವೇಶವನ್ನು ಪಡೆಯಿತು. ಆದರೂ ಜನರು ತಮ್ಮ ಗದ್ದೆಗಳನ್ನು ತೋಟಕ್ಕೆ ಪರಿವರ್ತಿಸದೆ ಪ್ರತಿವರ್ಷ ಗದ್ದೆಯನ್ನು ನಾಟಿಮಾಡುತಿದ್ದರು. ಕ್ರಮೇಣ ಸರಕಾರದ ನೀತಿ ನಿಯಮದಿಂದ ವನ್ಯ ಪ್ರಾಣಿಗಳಾದ ಕಾಡು ಹಂದಿ, ಜಿಂಕೆ, ಪಕ್ಷಿ, ಕೊನೆಗೆ ಆನೆಯಂತಹ ದೊಡ್ಡ ಮಟ್ಟದ ಪ್ರಾಣಿಗಳಿಗೆ ಬೆಳೆ ಆಹುತಿ ಯಾಗತೊಡಗಿತು. ಕೊನೆಗೆ ತಮ್ಮ ತಮ್ಮ ಮನೆಯವರ ಹೊಟ್ಟೆಯನ್ನು ಹೊರೆಯುವುದು ಹೋಗಲಿ, ಗದ್ದೆಗೆ ಹೂಡಿದ ಬಂಡವಾಳವೇ ದೊರಕದೆ ಹೋಯಿತು. ಅಲ್ಲಿಗೆ ಹಲವಾರು ಮಂದಿ ರೈತರು ಗದ್ದೆಯನ್ನು ನಾಟಿಮಾಡುವುದನ್ನು ಬಿಟ್ಟು ತೋಟದ ಕಡೆಗೂ, ಅಥವಾ ಬೆಂಗಳೂರಿನ ಕಡೆಗೆ ಮುಖಮಾಡತೊಡಗಿದರು. ಅಲ್ಲಿಗೆ ಇದು ಮುಗಿಯಲಿಲ್ಲ, ಕೆಲವು ರೈತರು ಸ್ವಾಭಿಮಾನದಿಂದ ತಮ್ಮ ಗದ್ದೆಯಲ್ಲಿ ಬೆಳೆದೇ, ತಾವು ಊಟಮಾಡುತ್ತೇವೆಯೆಂದು ಆನೆಯನ್ನು ಮತ್ತು ಇತರ ವನ್ಯ ಜೀವಿಗಳನ್ನು ರಾತ್ರಿ ಹಗಲು ಕಾವಲು ಕಾಯುತ್ತ, ಓಡಿಸಿ ಅವುಗಳು ತಿಂದು ಉಳಿಸಿದ ಬತ್ತವನ್ನು ತಂದು ಉಪಯೋಗಿಸುತ್ತಿದ್ದರು. ಆದರೆ ಈಗ ನಮ್ಮ ರಾಷ್ಟ್ರ ಪಕ್ಷಿಯಾದ ನವಿಲಿನ ಹಾವಳಿಯಿಂದ ರೈತ ಕಂಗೆಟ್ಟಿದ್ದಾನೆ. ಇದುವರೆಗೆ ಕೊಡಗಿನಲ್ಲಿ ಕಾಣದ ಈ ಪಕ್ಷಿಯು ಗುಂಪಾಗಿ ಇತರ ಪಕ್ಷಿಗಳ ಜೊತೆಯಲ್ಲಿ ಗದ್ದೆಗೆ ದಾಳಿಯಿಡಲು ಪ್ರಾರಂಭಿಸಿವೆ. ಸಣ್ಣಮಟ್ಟದ ಪಕ್ಷಿಗಳನ್ನು ಹೇಗಾದರೂ ನಿಯಂತ್ರಿಸಬಹುದು, ಆದರೆ ಎಂಟರಿಂದ ಹತ್ತು ಕೆ.ಜಿ ತೂಗುವ ಈ ಪಕ್ಷಿಯನ್ನು ನಿಯಂತ್ರಿಸಲು ಹೋಗಿ ಹೆಚ್ಚು ಕಮ್ಮಿ ಯಾದರೆ ಜಾಮೀನೇ ಇಲ್ಲದೆ ಜೈಲು ಪಾಲಾಗುವುದು ಗ್ಯಾರೆಂಟಿ ಎನ್ನುವುದು ರೈತರ ಅಳಲು. ಇನ್ನಾದರೂ ರೈತರ ಸಮಸ್ಯೆಗಳನ್ನು ಅರಿತು ಸಂಬಂಧಪಟ್ಟ ಅಧಿಕಾರಿಗಳು, ಸಮಸ್ಯೆಗೆ ಪರಿಹಾರ ಕಲ್ಪಿಸಿ ಕೊಡಬೇಕೆಂದು ರೈತರು ಮನವಿ ಮಾಡಿಕೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ