ಕಣ್ಣೀರಿಟ್ಟ ಮಾಜಿ ಸಂಸದ ಎಚ್.ವಿಶ್ವನಾಥ್ !


27-06-2017 616

ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಮಾಜಿ ಸಂಸದ ಎಚ್.ವಿಶ್ವನಾಥ್ ಪತ್ರಕರ್ತರೊಂದಿಗೆ ಸಂವಾದ ನಡೆಸಿದ್ದಾರೆ. ಪತ್ರಕರ್ತರೊಂದಿಗೆ ರಾಜಕೀಯ ನೆನಪುಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಇಲ್ಲಿ ತಮ್ಮ ರಾಜಕೀಯ ಬೆಳವಣಿಗೆ, ಅನುಭವಗಳನ್ನು ಮನಬಿಚ್ಚಿ ಮಾತನಾಡಿದರು. ಕಾಂಗ್ರೆಸ್ ನನ್ನ ರಕ್ತದ ಕಣಕಣದಲ್ಲಿ ಸೇರಿಕೊಂಡಿತ್ತು. ನನ್ನ ಎಲ್ಲಾ ಪುಸ್ತಕಗಳಲ್ಲಿ ಕಾಂಗ್ರೆಸ್‌ನ ಮೈಲಿಗಲ್ಲುಗಳನ್ನೇ ಉಲ್ಲೇಖ ಮಾಡಿದ್ದೆ. ಆದರೂ ಕಾಂಗ್ರೆಸ್ ಬಿಡುವ ಅನಿವಾರ್ಯತೆ ಬಂದುಬಿಟ್ಟಿತು ಎಂದು ಸಂವಾದದಲ್ಲಿ ಎಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸ್ವತಂತ್ರ ಸಚಿವಾಲಯ ಮಾಡಿದ್ದು, ನಾನು ಸಚಿವನಾಗಿದ್ದಾಗಲೇ ನನ್ನ ಕನ್ನಡಾಭಿಮಾನದಿಂದ ಜನರಿಗೆ ಕನ್ನಡದ ಮೇಲಿನ ಪ್ರೀತಿ ಹೆಚ್ಚುವಂತೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೆ. ಅರಣ್ಯ ಸಚಿವನಾಗಿದ್ದಾಗ ವೀರಪ್ಪನ್ ವಿರುದ್ದ ಕಾರ್ಯಾಚರಣೆ ಪರಿಶೀಲನೆ ಮಾಡಿ ನನ್ನ ಕೆಲಸ ಆರಂಭಿಸಿದ್ದೆ. ಶಿಕ್ಷಣ ಮಂತ್ರಿಯಾಗಿದ್ದಾಗ ಪ್ರತಿ ಮಗುವಿಗೆ ಶಿಕ್ಷಣ ಎಂಬ ಘೋಷವಾಕ್ಯದಿಂದ ಜಾಗೃತಿ ಆರಂಭಿಸಿದ್ದೆ.  ಗ್ರಾಮೀಣ ಪ್ರದೇಶಕ್ಕೂ ಶಿಕ್ಷಣದ ಮಹತ್ವದ ತಲುಪಿಸಲು ಪ್ರಯತ್ನ ಮಾಡಿದ್ದೆ. ನನಗೆ ನೀಡಿದ್ದ ಖಾತೆಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇನೆ ಎಂದರು. ಇನ್ನು ತಮ್ಮ ಮಾತುಗಳನ್ನು ಮುಂದುವರೆಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ, ಎಲ್ಲರನ್ನೂ ಏಕ ವಚನದಿಂದ ಕರೆಯುವ ಮುಖ್ಯಮಂತ್ರಿಯನ್ನು ನಾನು ನೋಡಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರನ್ನೂ ಏಕ ವಚನದಿಂದ ಕರೆಯುತ್ತಾರೆ ಎಂದು ಹರಿಹಾಯ್ದದರು. ಇತ್ತೀಚೆಗೆ ಕಿರುತೆರೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ತಮ್ಮನ್ನು ರಾಜಕೀಯವಾಗಿ ಮೇಲೆ ತಂದವರನ್ನು ಸ್ಮರಿಸಿಕೊಳ್ಳಲಿಲ್ಲ ಎಂದು ಟೀಕಿಸಿದರು. ಇನ್ನೂ ಭಾವುಕರಾದ ವಿಶ್ವನಾಥ್ ಅವರು ಸಂವಾದ ಕಾರ್ಯಕ್ರಮದಲ್ಲೇ ಕಣ್ಣೀರಿಟ್ಟರು. ಕಾಂಗ್ರೆಸ್ ಬಿಡುವ ಸ್ಥಿತಿ ಎದುರಾದ ಸಂದರ್ಭ ವಿವರಿಸುವಾಗ ಗದ್ಗದಿತರಾದ ವಿಶ್ವನಾಥ್, ಕಾಂಗ್ರೆಸ್ ನಲ್ಲಿ ಸಂಸ್ಕಾರ, ಸಂಸ್ಕೃತಿ ಇತ್ತು.  ಅವೆಲ್ಲವೂ ಕೊನೆಯಾಗುತ್ತಿರುವಂತೆ ಕಾಣುತ್ತಿದೆ. ಅದೆಲ್ಲದರಲ್ಲಿ ನಾನೇ ಕೊನೆಯ ತಲೆಮಾರು ಇರಬೇಕು ಎನ್ನುತ್ತ ಕಣ್ಣೀರು ಒರಸಿಕೊಂಡರು.

ಕಾಂಗ್ರೆಸ್ ಪಕ್ಷ ತೊರೆದ ಮಾತ್ರಕ್ಕೆ ನಾನು ಸಿದ್ದರಾಮಯ್ಯಗೆ ಹೆದರುವುದಿಲ್ಲ. ನಾನೇನು ಸುಮ್ಮನೆ ಕಂಬಳಿ ಹೊದ್ದುಕೊಂಡು ಮಲಗುವುದಿಲ್ಲ. ರಾಜಕೀಯವಾಗಿ ಸಿದ್ದರಾಮಯ್ಯ ಅವರನ್ನು ಎದುರಿಸಲು ಸಿದ್ಧನಿದ್ದೇನೆ ಎಂದು ಗುಡುಗಿದರು. ಕಾಂಗ್ರೆಸ್ ಬಿಟ್ಟ ಮೇಲೆ ರಿಲ್ಯಾಕ್ಸ್ ಆಗಿದ್ದೀನಿ. ಮುಂದಿನ ರಾಜಕೀಯ ನಡೆ ನಡೆದುಕೊಂಡೆ ಹೋಗಲಿದೆ. ಜೆಡಿಎಸ್ ಪಕ್ಷವನ್ನು ಎಂದೂ ಅಪ್ಪ ಮಕ್ಕಳ ಪಕ್ಷ ಎಂದಿಲ್ಲ. ದೇವೆಗೌಡರ ಬಗ್ಗೆ ಟೀಕೆಯೂ ಮಾಡಿಲ್ಲ. ನಾನೇ ಅಮ್ಮ ಮಗನ ಪಕ್ಷದಲ್ಲಿ ಇದ್ದಾಗ ಆ ರೀತಿ ಹೇಳಲು ಸಾಧ್ಯವೇ? ಅಪ್ಪ ಮಕ್ಕಳು, ಅಮ್ಮ ಮಗ ರಾಜಕೀಯಕ್ಕೆ ಬರೋದು ದೊಡ್ಡ ವಿಚಾರ ಅಲ್ಲ. ಇತ್ತಿಚಿನ ಭಾರತೀಯ ರಾಜಕಾರಣದಲ್ಲಿ ಅದು ಅಪ್ರಸ್ತುತ ಎಂದು ಹೇಳುವ ಮೂಲಕ ಮೂಲಕ ಜೆಡಿಎಸ್ ಪಕ್ಷವನ್ನು ಸೇರುವ ಸುಳಿವನ್ನು ನೀಡದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ.


ಒಂದು ಕಮೆಂಟನ್ನು ಬಿಡಿ